ಆದಿಚುಂಚನಗಿರಿ ಹಾಗು ಜೈನ ಮಠಕ್ಕೆ ನಿಕಟ ಸಂಪರ್ಕ ಇದೆ: ಶಂಭುನಾಥ ಸ್ವಾಮೀಜಿ

ಆದಿಚುಂಚನಗಿರಿ ಹಾಗು ಜೈನ ಮಠಕ್ಕೆ ನಿಕಟ ಸಂಪರ್ಕ ಇದೆ: ಶಂಭುನಾಥ ಸ್ವಾಮೀಜಿ
Published on

ಹಾಸನ: ಶ್ರವಣಬೆಳಗೊಳ ಮಠದ ಸುಖ, ದು:ಖದಲ್ಲಿ ಆದಿಚುಂಚನಗಿರಿ ಮಠದ ಸದಾ ಭಾಗಿಯಾಗುತ್ತದೆ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅವರು ಹೇಳಿದರು.
ನಗರದ ಜೈನ ಬಸದಿಯಲ್ಲಿ ಭಾನುವಾರ ಹಾಸನ ಜೈನ ಸಂಘ, ದಿಗಂಬರ ಜೈನ ಸಮಾಜದಿಂದ ಏರ್ಪಡಿಸಿದ್ದ ಶ್ರವಣಬೆಳಗೊಳ ಸ್ವಸ್ತಿಶ್ರೀ ಮದಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಸ್ವಾಮೀಜಿ ಅವರ ಪುರ ಪ್ರವೇಶ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು
ಶ್ರವಣಬೆಳಗೊಳದಲ್ಲಿರುವುದು ಜೈನ ಮಠವಲ್ಲ ಬದಲಾಗಿ ಮನುಷ್ಯ ಮಠ. ಆದಿಚುಂಚನಗಿರಿ ಹಾಗು ಜೈನ ಮಠಕ್ಕೆ ನಿಕಟ ಸಂಪರ್ಕ ಇದೆ. ಅದು ಜೈನಮಠ ಅಲ್ಲ ಬದಲಾಗಿ ಮನುಷ್ಯ ಮಠ. ಶ್ರವಣಬೆಳಗೊಳದ 20ನೇ ತೀಥರ್ಂಕರರಿಗೆ ಆದಿಚುಂಚನಗಿರಿ ಮಠದ ವತಿಯಿಂದ ಶೀಘ್ರದಲ್ಲೇ ಅಭಿನಂದನಾ ಸಮಾರಂಭ ಆಯೋಜಿಸುತ್ತೇವೆ ಎಂದು ಹೇಳಿದರು.
ಶ್ರೀಗಳು ಇನ್ನು ಯುವಕರಾಗಿದ್ದು ಅವರಿಗೆ ಎಲ್ಲರ ಸಹಕಾರ ಬೇಕಾಗುತ್ತದೆ. ಪ್ರತಿ ಹಳ್ಳಿ ಹಳ್ಳಿಗೂ ಶ್ರೀಗಳನ್ನು ಕರೆದೊಯ್ಯುವ ಜವಾಬ್ದಾರಿ ಸಮಾಜದ್ದಾಗಿದೆ. ಮದುವೆ, ಸಭೆ ಸಮಾರಂಭಗಳ ಆಮಂತ್ರಣ ಪತ್ರಿಕೆಗಳಲ್ಲಿ ಶ್ರೀಗಳ ಹೆಸರನ್ನು ತಪ್ಪದೆ ಮುದ್ರಿಸಿ ಎಲ್ಲೆಡೆ ಶ್ರೀಗಳ ಹೆಸರು ಪಸರಿಸುವಂತಾಗಬೇಕು. ಯಾವ ಕಾರಣಕ್ಕೂ ಪರಂಪರೆಯ ಗುರುಗಳನ್ನು ಮರೆಯಬಾರದು. ಶ್ರೀಮಂತಿಕೆ ನಮ್ಮ ಜೊತೆಗೆ ಬರುವುದಿಲ್ಲ. ಗುರುವಿನ ಆಶೀರ್ವಾದ ಮಾತ್ರ ಬರುತ್ತದೆ. ಜೈನ ಮಠದ ಶ್ರೀಗಳಿಗೆ ಎಲ್ಲರೂ ಸಹಕರಿಸಬೇಕೆಂದು ಕಿವಿಮಾತು ಹೇಳಿದರು.
ಒಂದು ಧರ್ಮದ ಜಗದ್ಗುರು ಮತ್ತೊಬ್ಬ ಜಗದ್ಗುರು ಬಗ್ಗೆ ಪ್ರೀತಿಯಿಂದ ಮಾತಾಡಿದ್ದು ಚಾರುಕೀರ್ತಿ ಭಟ್ಟಾರಕರು ಮಾತ್ರ. ಆದ್ದರಿಂದಲೇ ಅವರನ್ನು ಎಲ್ಲರೂ ಇಷ್ಟಪಡುತ್ತಿದ್ದರು. ಸನ್ಯಾಸಿಗಳು ಮರಣವನ್ನು ಸಂತೋಷದಿಂದ ಸ್ವಾಗತಿಸುತ್ತಾರೆ. ಆದರೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಅಗಲಿಕೆ ನಮಗೆ ತುಂಬಾ ದು:ಖ ಉಂಟು ಮಾಡಿದೆ. ಆದಿಚುಂಚನಗಿರಿ ಮಠದೊಂದಿಗೆ ಜೈನ ಮಠದ ಸಂಬಂಧ ಗಾಢವಾದುದು ಎಂದರು.
ಆದಿಚುಂಚನಗಿರಿ ಹಾಗು ಶ್ರವಣಬೆಳಗೊಳ ಜೈನ ಮಠದ ನಡುವೆ ತಾಯಿ-ಮಗಳ ಸಂಬಂಧವಿದ್ದು ಒಬ್ಬರಿಗೆ ನೋವಾದರೆ ಮತ್ತೊಬ್ಬರಿಗೆ ದು:ಖವಾಗುತ್ತದೆ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಕಾಲಾನಂತರ ಪೀಠ ಅಲಂಕರಿಸಿರುವ ಸ್ವಸ್ತಿಶ್ರೀ ಮದಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಸ್ವಾಮೀಜಿ ಅವರಿಗೆ ಸಮುದಾಯದ ಎಲ್ಲರೂ ಸಹಕಾರ ನೀಡಬೇಕೆಂದು ಕಿವಿಮಾತು ಹೇಳಿದರು.
ತಂದೆ-ತಾಯಿ ತಾವು ಬದುಕಿರುವ ವರೆಗೆ ಮಕ್ಕಳಿಗೆ ಸಂಸ್ಕಾರ ಕಲಿಸುತ್ತಾರೆ. ಆದರೆ, ಗುರು ಜೀವನ ಪಯರ್ಂತ ಸದ್ಗುಣಗಳನ್ನು ಕಲಿಸುತ್ತಾರೆ. ಆದ್ದರಿಂದ ಗುರುವಿಗೆ ಎಲ್ಲರೂ ಗೌರವ ನೀಡಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದರೆ ಜೀವನ ಸಾರ್ಥಕವಾಗುತ್ತದೆ. ಜೈನ ಮಠಕ್ಕೆ 19 ಪೂಜ್ಯರು ಮಾಡಿದ ಪುಣ್ಯದ ಕೆಲಸ ನಮಗೆ ವರವಾಗಿ ಕಾಯುತ್ತಿದೆ. ಜೈನ ಧರ್ಮ, ಹಿಂದು ಧರ್ಮ ಎಂಬ ಭೇದ ಭಾವ ನಮ್ಮಲ್ಲಿ ಇಲ್ಲ. ಎರಡೂ ಧರ್ಮಗಳ ಸಾರ ಮನುಷ್ಯ ಧರ್ಮ ಎಂಬುದಾಗಿದೆ.
ಸ್ವಸ್ತಿಶ್ರೀ ಮದಭಿನವ ಚಾರುಕೀರ್ತಿ ಪಡಿತಾಚಾರ್ಯವರ್ಯ ಭಟ್ಟಾರಕರು ಮಾತನಾಡಿ, 1928ರಲ್ಲಿ ಪೀಠ ಅಲಂಕರಿಸಿದ್ದ
ನೇಮಿಸಾಗರ ಶ್ರೀಗಳು ಪ್ರಥಮವಾಗಿ ಹಾಸನಕ್ಕೆ ಪುರ ಪ್ರವೇಶ ಮಾಡಿದ್ದರು. ಆ ಹಿನ್ನಲೆಯಲ್ಲಿ ನಾವು ಪ್ರಥಮವಾಗಿ ಬಂದಿದ್ದೇವೆ. ಹಾಸನದ ಜೈನ ಸಮಾಜ ಬಾಂಧವರು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಹಾಸನ ಎಂದರೆ ಶಾಂತ ಸ್ವಭಾವದವರು ಎಂಬ ನಂಬಿಕೆಯಿದೆ. ಇವತ್ತು ಇಲ್ಲಿ ದೊರೆತಿರುವ ಪ್ರೀತಿಗೆ ಮನಸೋತಿದೆ ಎಂದರು.
ಶುಭ ಚಿಂತನೆ ಮಾಡಿದರೆ ಮನಸ್ಸಿಗೆ ಶೋಭೆ. ಸಭೆ ಸಮಾರಂಭಗಳಲ್ಲಿ ಚಿನ್ನಾಭರಣ ಧರಿಸಿದರೆ ಶೋಭೆ ಎನ್ನುತ್ತಾರೆ. ಆದರೆ ಅಹಂಕಾರ ಎಂಬ ಒಡವೆ ಧರಿಸಬಾರದು. ಒಡವೆ, ವಸ್ತ್ರ ಹೇಗೆ ಬಹಿರಂಗವನ್ನು ಸುಂದರವಾಗಿ ಕಾಣಿಸುತ್ತದೆಯೋ ಅದೇ ರೀತಿ ಅಂತರಂಗವೂ ಸ್ವಚ್ಛವಾಗಿರಬೇಕೆಂದರು.
ವೇದಿಕೆ ಕಾರ್ಯಕ್ರಮ ಆರಂಭಕ್ಕು ಮೊದಲು ಭಟ್ಟಾರಕರಿಗೆ ಅಷ್ಟವಿದಾರ್ಚನೆ ನೆರವೇರಿಸಲಾಯಿತು. ಶ್ರವಣಬೆಳಗೊಳ ಮಠಕ್ಕೆ ಹಾಸನ ಜೈನ ಸಮಾಜದಿಂದ 2 ಲಕ್ಷ ರೂ. ಕಾಣಿಕೆ ಅರ್ಪಿಸಲಾಯಿತು. ಆದಿಚುಂಚನಗಿರಿ ಮಠದಿಂದ ಹೊರತರಲಾಗಿರುವ ಸತ್ಪುರುಷರ ಸುಗಂಧ ಪುಸ್ತಕವನ್ನು ಶ್ರೀ ಶಂಭುನಾಥ ಸ್ವಾಮೀಜಿ ಶ್ರೀಗಳಿಗೆ ನೀಡಿದರು.
ಜಿಲ್ಲಾ ಜೈನ ಸಂಘದ ಅಧ್ಯಕ್ಷ ಹೆಚ್.ಬಿ.ಶಾಂತೀಶ್, ಮಹಾವೀರ ಎಜ್ಯುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಂ.ಧನಪಾಲ್, ಜೈನ ಸಂಘದ ಮಾಜಿ ಅಧ್ಯಕ್ಷ ಎಂ.ಅಜಿತ್‌ಕುಮಾರ್, ಸುಪ್ರಭ ಅಭಿನಂದನ್ ಇತರರಿದ್ದರು.
ಇದಕ್ಕೂ ಮೊದಲು ಬೆಳಗ್ಗೆ ಶ್ರವಣಬೆಳಗೊಳದ ಶ್ರೀಗಳು ನಗರದ ಬೂವನಹಳ್ಳಿ ಮುಖ್ಯ ರಸ್ತೆಗೆ ಆಗಮಿಸಿದ ಸಂದರ್ಭದಲ್ಲಿ ಬೈಕ್ ರ್ಯಾಲಿಯ ಮೂಲಕ ಅವರನ್ನು ನಗರಕ್ಕೆ ಮೆರವಣಿಗೆ ಮೂಲಕ ಆಗಮಿಸಿ ನಂತರ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಬೆಳ್ಳಿ ಅಂಬಾರಿಯ ಮೇಲೆ ಶ್ರೀಗಳನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net