

ಮೈಸೂರು: ನಗರದ ಹೆಬ್ಬಾಳಿನಲ್ಲಿ ನಿರ್ಮಿಸಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ನೂತನ ಕಟ್ಟಡ, ಬಿಜಿಎಸ್ ಸಾಂಸ್ಕೃತಿಕ ಭವನ, ಉಚಿತ ವಿದ್ಯಾರ್ಥಿನಿಲಯದ ಲೋಕಾರ್ಪಣೆ ಅಂಗವಾಗಿ ಭಾನುವಾರ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.
ಲಕ್ಷ್ಮೀಕಾಂತಸ್ವಾಮಿ ದೇವಸ್ಥಾನದ ಬಳಿ ತುಮಕೂರು ವೀರನಗುಡಿ ವೀರಭದ್ರೇಶ್ವರ ದೇವಸ್ಥಾನದ ಅರ್ಚಕ ವಿನೋದ್ ದೀಕ್ಷಿತ್ ನೇತೃತ್ವದಲ್ಲಿ 25 ಅರ್ಚಕರ ತಂಡ ಪೂಜಾ ಕೈಂಕರ್ಯಗಳನ್ನು ನಡೆಸಿಕೊಟ್ಟರು. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಮಂಡ್ಯ ಶಾಖಾ ಮಠದ ಶ್ರೀ ಪುರುಷೋತ್ತಮನಾಥ ಸ್ಬಾಮೀಜಿ, ಬೆಂಗಳೂರು ವಿಜಯನಗರದ ಸೌಮ್ಯನಾಥ ಸ್ವಾಮೀಜಿ, ಮಂಗಳೂರಿನ ಧರ್ಮಪಾಲನಾಥ ಸ್ವಾಮೀಜಿ, ಹಾಸನದ ಶಂಭುನಾಥ ಸ್ವಾಮೀಜಿ, ದಸರಿಘಟ್ಟದ ಚಂದ್ರಶೇಖರನಾಥ ಸ್ವಾಮೀಜಿ, ಚುಂಚನಗಿರಿಯ ನಾರಾಯಣಸ್ವಾಮಿ, ಚಾಮುಂಡಿಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಇತರರು ಭಾಗವಹಿಸಿದ್ದರು.
ಪ್ರತಿಷ್ಠಾಪಿತ ದೇವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನಮಿಸಿದರು. ಬಳಿಕ ಬ್ಯಾಟರಿ ಚಾಲಿತ ವಾಹನದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮೈಸೂರು ಶಾಖಾ ಮಠದ ನೂತನ ಕಟ್ಟಡಕ್ಕೆ ಭೇಟಿ ನೀಡಿ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ಕಳಸಕ್ಕೆ ಆರತಿ ಬೆಳಗಿದರು.
ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಕೆ.ಹರೀಶ್‌ಗೌಡ, ಮೇಯರ್ ಶಿವಕುಮಾರ್, ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು, ಅಪ್ಪಾಜಿಗೌಡ, ಕೆ.ಟಿ.ಶ್ರೀಕಂಠೇಗೌಡ, ಎಲ್.ನಾಗೇಂದ್ರ, ಮಾಜಿ ಮೇಯರ್ ಸಂದೇಶ್‌ಸ್ವಾಮಿ ಇತರರು ಇದ್ದರು.
ಭೈರವ ಜ್ಯೋತಿ ಸಂಚಾರ:
ಉದ್ಘಾಟನೆ ಕಾರ್ಯಕ್ರಮದ ಅಂಗವಾಗಿ ನಗರದ ವಿವಿಧ ಬಡಾವಣೆ, ರಸ್ತೆಗಳಲ್ಲಿ ರಥದಲ್ಲಿ ಭೈರವ ಜ್ಯೋತಿ ಸಂಚರಿಸಿತು. ಹಲವು ಬಡಾವಣೆಗಳ ಬಳಿಕ ಹೆಬ್ಬಾಳಿನ ಲಕ್ಷ್ಮೀಕಾಂತಸ್ವಾಮಿ ದೇವಸ್ಥಾನದ ಬಳಿಗೆ ಆಗಮಿಸಿದ ಭೈರವ ಜ್ಯೋತಿಗೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸೋಮೇಶ್ವರನಾಥ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಆರತಿ ಬೆಳಗಿ ಬರಮಾಡಿಕೊಂಡರು.
ಬಳಿಕ ಮಂಗಳ ವಾದ್ಯ, ಛತ್ರಿ, ಚಾಮರಗಳ ಮೆರುಗಿನೊಂದಿಗೆ ಜ್ಯೋತಿಯನ್ನು ಹೋಮ ನಡೆಯುತ್ತಿದ್ದ ಸ್ಥಳಕ್ಕೆ ತಂದು ಪ್ರತಿಷ್ಠಾಪಿಸಲಾಯಿತು. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಲೋಕ ಕಲ್ಯಾಣಾರ್ಥವಾಗಿ ಚಂಡಿಕಾಹೋಮದ ಸಂಕಲ್ಪ ಮಾಡಿದರು. ಮಹಾಗಣಪತಿ, ದುರ್ಗಾ, ಲಕ್ಷ್ಮೀ, ಸರಸ್ವತಿ, ಲಕ್ಷ್ಮೀಕಾಂತಸ್ವಾಮಿ, ಮಹಾವಿಷ್ಣು ಸ್ವಾಮಿ, ಭೈರವೇಶ್ವರ ದೇವರಿಗೆ ಪೂಜೆ, ನವಾಕ್ಷರಿ ಹೋಮ, ಸಂಕಲ್ಪ ನೆರವೇರಿತು.