ಆದಾಯ ವೃದ್ಧಿಗೆ ಉತ್ಪಾದನೆ ವೆಚ್ಚ ಕಡಿತ ಅಗತ್ಯ

CTD NEWS shepherd
Published on

ಚಿತ್ರದುರ್ಗ: ಉತ್ಪಾದನಾ ವೆಚ್ಚ ಕಡಿಮೆಯಾದರೆ ರೈತರು ಉತ್ತಮ ಆದಾಯ ಪಡೆಯಬಹುದಾಗಿದೆ ಎಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ.ತಿಪ್ಪೇಸ್ವಾಮಿ ಹೇಳಿದರು.
ನಗರದ ಎಪಿಎಂಸಿ ಆವರಣದಲ್ಲಿ ಶುಕ್ರವಾರ ಶ್ರೀ ದ್ಯಾಮಲಾಂಬ ಕುರಿ ಮತ್ತು ಮೇಕೆ ರೈತ ಉತ್ಪಾದಕರ ಕಂಪನಿ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ರೈತ ಉತ್ಪಾದಕ ಕಂಪನಿಗಳು ಅಗತ್ಯ ಪರಿಕರಗಳನ್ನು ಕಡಿಮೆ ಬೆಲೆಗೆ ಪೂರೈಸಬೇಕು. ಮಧ್ಯವರ್ತಿಗಳ ಹಾವಳಿ ನಿಯಂತ್ರಿಸಿದರೆ ಬೆಳೆಗಳಿಗೆ ಉತ್ತಮ ಧಾರಣೆ ಸಿಗಲಿದೆ. ಕುರಿ ಮೇಕೆ ಸಾಕಣೆಗೆ ಬೇಕಾದ ಮೇವು, ಕಾಲ ಕಾಲಕ್ಕೆ ಲಸಿಕೆ ಸಿಗುವಂತಾದಾಗ ಕುರಿಗಾಹಿಗಳ ಆರ್ಥಿಕ ಮಟ್ಟ ಸುಧಾರಣೆಯಾಗಲು ಸಾಧ್ಯವಿದೆ ಎಂದರು.
ಕೃಷಿ ಜತೆ ಹೈನುಗಾರಿಕೆ, ಕುರಿ-ಮೇಕೆ ಸಾಕಣೆಯಲ್ಲಿ ತೊಡಗುವವರು ದೊಡ್ಡ, ದೊಡ್ಡ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವುದು ಸೂಕ್ತ. ಕೃಷಿ ಪರಿಕರಗಳನ್ನು ಮಾರುಕಟ್ಟೆಯಲ್ಲಿ ಖರೀದಿಸುವ ಬದಲು ಕಂಪನಿಗಳಿಂದ ಖರೀದಿಸುವುದು ಒಳ್ಳೆಯದು. ಹಾಗಾಗಿ ರೈತರು ಕಂಪನಿ ಸದಸ್ಯತ್ವ ಪಡೆದು ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆವಹಿಸಿದ್ದ ಶ್ರೀ ದ್ಯಾಮಲಾಂಬಾ ಕುರಿ ಮತ್ತು ಮೇಕೆ ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ಲಕ್ಷ್ಮೀಕಾಂತ ಎಸ್.ಕುಂಚಿಗನಹಾಳ್ ಅವರು ಮಾತನಾಡಿ, ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಗೆ ಹೆಚ್ಚಿನ ಆದಾಯ ಸಿಗಬೇಕೆನ್ನುವುದು ಕಂಪನಿ ಉದ್ದೇಶ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆದು ಕಂಪನಿಯನ್ನು ಬಲಿಷ್ಠಗೊಳಿಸುವಂತೆ ಮನವಿ ಮಾಡಿದರು.
ಜಿಲ್ಲಾ ಸಂಯೋಜಕ ಡಾ.ಡಿ.ಲೋಕೇಶ್, ಚಂದ್ರಶೇಖರ್, ಮುಕ್ಕಣ್ಣ, ಸುಭಾಷ್, ಸುರೇಶ್, ಹೇಮಣ್ಣ ಮತ್ತಿತರ ಕಂಪನಿ ಕಾರ‌್ಯಕಾರಿ ಮಂಡಳಿ ಸದಸ್ಯರು ಇದ್ದರು. ಮುಖ್ಯಕಾರ‌್ಯ ನಿರ್ವಹಣಾಧಿಕಾರಿ ಭರತ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net