

ಮೈಸೂರು: ಕಾರ್ಪೋರೇಟ್ ಕಂಪನಿಗಳು ರೈತರನ್ನು ಭಿಕ್ಷುಕರನ್ನಾಗಿ ಮಾಡುತ್ತಿವೆ. ಇಂತಹವರಿಗೆ ಮದುವೆಯಾಗಲು ಯಾರು ಹೆಣ್ಣು ಕೊಡುತ್ತಾರೆ? ಎಂದು ಮಂಡ್ಯದ ರೈತ ಮುಖಂಡ ಟಿ.ಎಲ್.ಕೃಷ್ಣೇಗೌಡ ಪ್ರಶ್ನಿಸಿದರು.
ಭೂಮಿ ಬಳಗ ವತಿಯಿಂದ ರಂಗಾಯಣದ ಬಿ.ವಿ.ಕಾರಂತ ರಂಗ ಚಾವಡಿಯಲ್ಲಿ ಭಾನುವಾರ ಆಯೋಜಿಸಿದ್ದ ‘ಸಂಗಾತಿಯರು ಸಿಗದ ಸಂಕಟ ಮತ್ತು ಹೆಣ್ಣು ಭ್ರೂಣ ಹತ್ಯೆ: ಸಮಸ್ಯೆ ಮತ್ತು ಪರಿಹಾರ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿ ಕ್ಷೇತ್ರವೂ ಕಾರ್ಪೋರೇಟ್ ಆಗುತ್ತಿದೆ. ಸಣ್ಣ ಭೂಹಿಡುವಳಿದಾರರು ಭೂಮಿ ಕಳೆದುಕೊಂಡು ಕೂಲಿ ಕಾರ್ಮಿಕರಾಗುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ಆಹಾರ ಖಾಸಗೀಕರಣದಿಂದ ಜೀವನವೇ ದುಬಾರಿಯಾಗಿದೆ. ಆದಾಯ ಖಾತ್ರಿ, ಬದುಕಿನ ಖಾತ್ರಿವಿಲ್ಲದ ಕಾರಣಕ್ಕೆ ರೈತರು, ಗಂಡು ಮಕ್ಕಳಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂದು ಹೇಳಿದರು.
ಕೃಷಿ ಮತ್ತು ಅದರ ಆಯಾಮಗಳ ಸಮಸ್ಯೆಗಳಿಗೆ ಪರಿಹಾರ ಸಿಗದೇ ಸಂಗಾತಿಯರು ಸಿಗದ ಸಂಕಟವೂ ಬಗೆಹರಿಯಲ್ಲ ಎಂದು ತಿಳಿಸಿದರು.
ಈ ಸಮಸ್ಯೆ ಮಂಡ್ಯ, ಭಾರತಕ್ಕೆ ಸೀಮಿತವಲ್ಲ. ಅಮೆರಿಕಾ, ಯೂರೋಪ್ ಸೇರಿದಂತೆ ಬೇರೆ ದೇಶದಲ್ಲೂ ಇದೆ. ಫ್ರಾನ್ಸ್‌ನಲ್ಲಿ ಕೃಷಿಯಲ್ಲಿ ತೊಡಗಿರುವ ಶೇ.25ರಷ್ಟು ಯುವಕರಿಗೆ ಹೆಣ್ಣು ಸಿಗುತ್ತಿಲ್ಲ. ಈ ಸಮಸ್ಯೆಗಳಿಗೆ ಬೇರೆ ಬೇರೆ ಕಾರಣಗಳಿವೆ. ವಿದೇಶಗಳಲ್ಲೂ ರೈತ ಆತ್ಮಹತ್ಯೆಗಳು ಸಂಭವಿಸುತ್ತಿವೆ ಎಂದರು.
ಹೆಣ್ಣು ಭ್ರೂಣ ಹತ್ಯೆ ಪ್ರಕರಣವನ್ನು ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂಬ ಸಮಸ್ಯೆಯೊಂದಿಗೆ ಥಳುಕು ಹಾಕಲಾಗುತ್ತಿದೆ. ಆದರೆ, ಇದು ವಾಸ್ತವವಲ್ಲ. ಇದು ಸಮಸ್ಯೆಯನ್ನು ಸಂಕುಚಿತಗೊಳಿಸುವ ಪ್ರಯತ್ನವಷ್ಟೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುಖಕ್ಕಾಗಿ ಹಾತೊರೆವುದು ಅಭಿವೃದ್ಧಿಯೇ? ಬಂಡವಾಳಶಾಹಿಗಳು ಭೌತಿಕ ಸುಖಕ್ಕಾಗಿ ಅಂತಹ ನಾಗರಿಕತೆ ಕಟ್ಟುತ್ತಿದ್ದಾರೆ. ಅದಕ್ಕಾಗಿ ಬಿಡಿ ಉತ್ಪಾದಕರನ್ನು ನಾಶ ಮಾಡಿ, ಗ್ರಾಹಕರ ಪಡೆ, ಕಡಿಮೆ ವೆಚ್ಚ ಕಾರ್ಮಿಕರನ್ನು ಸೃಷ್ಟಿಸಲಾಗುತ್ತಿದೆ. ಇದು ಹಿಂದಿಗಿಂತ ಈಗ ಅಧಿಕವಾಗಿದೆ. ಪರ್ಯಾಯ ಉದ್ಯೋಗ ಕೊಟ್ಟರೆ ಶೇ.57ರಷ್ಟು ರೈತರು ಕೃಷಿ ಬಿಡಲು ಸಿದ್ಧವಾಗಿದ್ದಾರೆ.
ಏಕೆ ಈ ಸ್ಥಿತಿ ನಿರ್ಮಾಣವಾಗಿದೆ? ಎಂದು ಪ್ರಶ್ನಿಸಿದರು.
1997ರಲ್ಲಿ ಎಸ್.ಎಂ.ಕೃಷ್ಣ ಸರ್ಕಾರದ ಅವಧಿಯಲ್ಲೇ ಮೈಕ್ರೋ ಫೈನಾನ್ಸ್‌ಗಳಿಂದ ಹಳ್ಳಿಗಳಲ್ಲಿ ಸಾಲ ಕೊಡಲು ಶುರುವಾಯಿತು. ಏಕೆ ಆರಂಭಿಸಿದರು? ಬಹುರಾಷ್ಟ್ರೀಯ ಕಂಪನಿಗಳ ಗ್ರಾಹಕರನ್ನು ತಯಾರು ಮಾಡಲು ಹಳ್ಳಿಗರ ಕೈಯಲ್ಲಿ ಹಣ ಕೊಡಲಾಯಿತು. ಟಿವಿ, ಫ್ರಿಜ್ ಇನ್ನಿತರ ವಸ್ತುಗಳ ಖರೀದಿಗಾಗಿ ಸಾಲ ಮಾಡಿದ್ದಾರೆ. ಇದರಿಂದ ಯಾರಿಗೆ ಲಾಭವಾಯಿತು? ಎಂದು ಪ್ರಶ್ನಿಸಿದರು.
ಮೈಕ್ರೋ ಫೈನಾನ್ಸ್‌ಗಳಿಂದ ಮಂಡ್ಯ ಜಿಲ್ಲೆವೊಂದರಲ್ಲೇ 2,880 ಕೋಟಿ ರೂ. ಮತ್ತು ರಾಜ್ಯದಲ್ಲಿ 63 ಸಾವಿರ ಕೋಟಿ ರೂ. ಸಾಲ ಕೊಡಲಾಗಿದೆ. ರೈತರಿಗೆ ಅಷ್ಟೇ ಅಲ್ಲ, ಮೈಕ್ರೋ ಫೈನಾನ್ಸ್‌ಗಳ ಸಾಲಗಾರರಿಗೂ ಮದುವೆಗೆ ಹೆಣ್ಣು ಕೊಡಲ್ಲ ಎಂದರು.
ಈ ಸಮಸ್ಯೆಗೆ ಮೌಢ್ಯ, ಕಂದಾಚಾರವನ್ನು ಜೋಡಿಸಿ ದಾರಿ ತಪ್ಪಿಸಲಾಗುತ್ತಿದೆ. ಕುಂಬಮೇಳಕ್ಕೆ ಹೊಗಿ ಸ್ನಾನ ಮಾಡಿದರೆ, ಮಲೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆ ಯಾತ್ರೆ ಮಾಡಿದರೆ ಹೆಣ್ಣು ಸಿಗಲ್ಲ. ವಿಧಾನಸೌಧ, ಸಂಸತ್‌ಗೆ ಮುತ್ತಿಗೆ ಹಾಕುವ ಮೂಲಕ ಸರ್ಕಾರದ ನೀತಿ ಬದಲಿಸಿದರೆ ಮಾತ್ರ ಪರಿಹಾರ ಸಿಗಲಿದೆ ಎಂದರು.
ಬದುಕು ಹರಣ ಮಾಡುತ್ತಿರುವ ಕೇಂದ್ರ, ರಾಜ್ಯ ಸರ್ಕಾರದ ನೀತಿ ಪರಿವರ್ತನೆಯಾಗಬೇಕು. ಸಮಗ್ರ ಭೂ ಸುಧಾರಣೆಯಾಗಬೇಕು. ಕಾರ್ಪೋರೇಟ್ ಕೃಷಿ ಬದಲಿಗೆ ಪ್ರಜಾಪ್ರಭುತ್ವ ಕೃಷಿ ಅನುಷ್ಠಾನವಾಗಿ ಕನಿಷ್ಠ ಆದಾಯ ಖಾತ್ರಿ ಮಾಡಬೇಕು. ಆಗಲೇ ಈ ಸಮಸ್ಯೆಗೂ ಪರಿಹಾರ ದೊರೆಯಲಿದೆ ಎಂದು ಹೇಳಿದರು.
ಭೂಮಿ ಬಳಗದ ಅಧ್ಯಕ್ಷ, ಚಿಂತಕ ಡಾ.ಹಿ.ಸಿ.ರಾಮಚಂದ್ರೇಗೌಡ ಮಾತನಾಡಿ, ರೈತ ಯುವಕರಿಗೆ ಮದುವೆ ಹೆಣ್ಣು ಸಿಗುತ್ತಿಲ್ಲ ಎಂಬುದು ಹಾಸ್ಯವಲ್ಲ. ಗಂಭೀರ ಸಮಸ್ಯೆ.
ಗಂಡಂದರಿಗಿಂತ ಹೆಂಡತಿಯಿಂದಲೇ ವಿಚ್ಛೇದನ ಕೊಡುವುದು ಅಧಿಕವಾಗಿದೆ. ಹೆಚ್ಚಿನ ಮಕ್ಕಳ ನ್ನು ಹೆರಬೇಕೆಂದು ಸ್ವಾಮೀಜಿಗಳು, ರಾಜಕಾರಣಿಗಳು ಹೇಳುತ್ತಿದ್ದಾರೆ. ಇದೆಲ್ಲ ಜಲ್ವಂತ ಸಮಸ್ಯೆಗಳು. ಕುಟುಂಬವಿಲ್ಲದೇ ಸಮಾಜದ ಅಸ್ತಿತ್ವ ಇಲ್ಲ. ಕೌಟುಂಬಿಕ ವ್ಯವಸ್ಥೆ ಮೇಲೆ ಇವುಗಳೆಲ್ಲ ಪರಿಣಾಮ ಬೀರುತ್ತಿವೆ ಎಂದರು.
ಮೈವಿವಿ ಮನೋವಿಜ್ಞಾನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ.ಜಿ.ವೆಂಕಟೇಶ್ ಕುಮಾರ್, ಮಕ್ಕಳ ಹಕ್ಕುಗಳ ಸಂಪನ್ಮೂಲ ವ್ಯಕ್ತಿ ಧನಂಜಯ ಎಲಿಯೂರು ಇದ್ದರು.