

ಕಲಬುರಗಿ: ಎಲ್ಲರೂ ಉಪದೇಶ ಹೇಳುತ್ತಾರೆ. ಆದರೆ ಆಚರಣೆ ಮಾಡುವುದಿಲ್ಲ. ಹೀಗಾಗಿ ಜೀವನದಲ್ಲಿ ಆದರ್ಶಗಳ ಆಚರಣೆ ಮತ್ತು ಅನುಷ್ಠಾನಕ್ಕಿಂತ ದೊಡ್ಡ ಉಪದೇಶ ಮತ್ತೊಂದಿಲ್ಲ ಎಂದು ಬ್ರಹ್ಮಚಾರಿ ಮಹೇಶ್ವರ ಗುರೂಜಿ ಹೇಳಿದರು.
ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ರಮಾಬಾಯಿ ಜಹಾಗೀರದಾರ್(ಆರ್‌ಜೆ) ಪದವಿಪೂರ್ವ ಕಾಲೇಜು ಶನಿವಾರ ಆಯೋಜಿಸಿದ್ದ ಪರಿಚಯ ಕಾರ್ಯಕ್ರಮ ಉದ್ಘಾಟಿಸಿದ ಅವರು, ಲೌಖಿಕ ವಿದ್ಯೆ ಕಲಿಸುವವರಿಗೆ ಉಪಾಧ್ಯಾಯ ಎನ್ನುತ್ತಾರೆ. ಹತ್ತು ಉಪಾಧ್ಯಾಯರಿಗೆ ಒಬ್ಬ ಆಚಾರ್ಯ ಸಮ. ನೂರು ಆಚಾರ್ಯರು ಒಬ್ಬ ತಂದೆಗೆ ಸಮ. ಸಾವಿರ ತಂದೆಗೆ ಒಬ್ಬ ತಾಯಿ ಸಮವಾಗುತ್ತಾಳೆ. ಅಂತೆಯೇ ತಾಯಿಗಿದೆ ಪವಿತ್ರ ಸ್ಥಾನ ಎಂದರು.
ವಿದ್ಯಾರ್ಥಿಗಳು ತಂದೆ-ತಾಯಿ, ವೈದ್ಯರು ಹಾಗೂ ಗುರು (ಶಿಕ್ಷಕರ) ಬಳಿ ಯಾವತ್ತೂ ಸುಳ್ಳು ಹೇಳಬಾರದು. ವೈದ್ಯರ ಬಳಿ ಸುಳ್ಳು ಹೇಳಿದರೆ ರೋಗ ವಾಸಿಯಾಗುವುದಿಲ್ಲ. ತಂದೆ-ತಾಯಿ, ಶಿಕ್ಷಕರ ಬಳಿ ಸುಳ್ಳು ಹೇಳಿದರೆ ಜೀವನ ಹಾಳಾಗುತ್ತದೆ ಎಂದು ಎಚ್ಚರಿಸಿದರು.
ಬದುಕು ಗೆಲ್ಲಬೇಕಾದರೆ ಆಧ್ಯಾತ್ಮಿಕ ಶಿಕ್ಷಣ ಅಗತ್ಯ. ಶಿಕ್ಷಣದ ಜತೆ ಸಂಸ್ಕಾರವೂ ಬೇಕು. ಸಂಸ್ಕಾರದ ಕೊರತೆಯಿಂದಾಗಿ ಇಂದು ಜಗತ್ತಿನಲ್ಲಿ ಅಶಾಂತಿ ತಾಂಡವವಾಡುತ್ತಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಹೆಚ್ಚೆಚ್ಚು ಆದರ್ಶ ಮೌಲ್ಯಗಳನ್ನು ಕಲಿಸಬೇಕು. ಶಿಕ್ಷಕರ ಮನಸ್ಸು ಗೆಲ್ಲುವವರೇ ನಿಜವಾದ ಆದರ್ಶ ವಿದ್ಯಾರ್ಥಿಗಳು. ಮಕ್ಕಳಲ್ಲಿ ಕಲಿಯುವ ಇಚ್ಛೆ ಮೂಡಿಸುವವನೇ ಆದರ್ಶ ಶಿಕ್ಷಕ ಎಂದು ಗುರೂಜಿ ಹೇಳಿದರು.
ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕರಾದ ಪ್ರಾಚಾರ್ಯ ಡಾ.ಪ್ರಹ್ಲಾದ್ ಭುರ್ಲಿ, ಆಡಳಿತಾಧಿಕಾರಿ ಜ್ಯೋತಿ ಪ್ರಹ್ಲಾದ್ ಭುರ್ಲಿ ಇತರರಿದ್ದರು. ನೀಟ್, ಜೆಇಇ ಹಾಗೂ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.