

ಬಸವಕಲ್ಯಾಣ: ಜೀವನದಲ್ಲಿ ಮಾಡುವ ಮಾಡುವ ಸತ್ಕಾರ್ಯಗಳೆ ಸದಾಶಿವನ ನಿಜವಾದ ಪೂಜೆ. ಆದರ್ಶ ಸೇವೆಯಿಂದ ಜೀವನದಲ್ಲಿ ಎತ್ತರದ ಸ್ಥಾನ ಗಳಿಸಬಹುದು, ಸರಳತೆಯಿಂದ ಜನಮಾನಸದಲ್ಲಿ ಶಾಶ್ವತವಾಗಿ ನೆಲೆ ನಿಲ್ಲಬಹುದು ಎನ್ನುವುದಕ್ಕೆ ಡಾ.ಸುಶೀಲಾ ಹೊಳಕುಂದೆ ಅವರು ನಮಗೆ ಮಾದರಿಯಾಗಿ ಕಾಣುವರು ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.
ಬಂದವರ ಓಣಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ನಿವೃತ್ತ ಜಿಲ್ಲಾ ಶಸ್ತç ಚಿಕಿತ್ಸಕಿ ಡಾ.ಸುಶೀಲಾ ಎಸ್.ಹೊಳಕುಂದೆ ಅವರ ವಿರಚಿತ `ಸುಶೀಲಾ ಶಂಕರ ಸಾಗಿ ಬಂದ ದಾರಿ' ಗ್ರಂಥವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಶ್ರೀಗಳು, ವೈದ್ಯ ವೃತ್ತಿಯಲ್ಲಿ ಅಧ್ಯಾತ್ಮ ಹಾಗೂ ಗುರು ನಿಷ್ಠೆಯನ್ನು ಮೇಳಸಿಕೊಂಡು ಸೇವೆ ಮಾಡಿದ ಅಪರೂಪದ ಸಾಮಾಜಿಕ ಕಳಕಳಿ ಹೊಂದಿರುವ ಡಾ.ಹೊಳಕುಂದೆ ಅವರು ಸೇವೆ ಸಲ್ಲಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾನ್ನಿಧ್ಯ ವಹಿಸಿದ್ದ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಆಶೀರ್ವಚನ ನೀಡಿದರು.
ಎಂಎಲ್ಸಿ ಎಂ.ಜಿ.ಮುಳೆ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಕರ್ನಾಟಕ ಮೀನುಗಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ, ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿ ಸಾವಿತ್ರಿ ಸಲಗರ, ಡಾ.ಸುಶೀಲಾ ಹೊಳಕುಂದೆ ಮಾತನಾಡಿದರು.
ನಿವೃತ್ತ ನ್ಯಾಯಾಧೀಶ ಸುಭಾಷಚಂದ್ರ ನಾಗರಾಳೆ, ಬಿಡಿಬಿಪಿ ನಿರ್ದೇಶಕ ಸುಭಾಷ ಹೊಳಕುಂದೆ, ಮಲ್ಲಿನಾಥ ಹಿರೇಮಠ, ಡಾ.ದೀಪಾ, ಡಾ.ವಿಜಯಕುಮಾರ ಅಂತಪ್ಪ, ರಶ್ಮೀ, ಶಿವಕುಮಾರ ಎಕ್ಕೆಳೆ, ನಂದಿನಿ, ಬಾಲಾಜಿ ಚಿಕ್ರಾಳೆ, ಡಾ.ರೂಪಾ, ಡಾ.ಶಶಿಧರ ಬನ್ನಾಳೆ ಹಾಗೂ ಹೊಳಕುಂದೆ ಪರಿವಾರದವರು ಇದ್ದರು. ನವಲಿಂಗ ಪಾಟೀಲ ನಿರೂಪಣೆ ಮಾಡಿದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನೆ ಹಾಡಿದರು.
ಡಾ.ಸುಶೀಲಾ ಹೊಳಕುಂದೆ ಅವರು ಬರೆದ `ಸುಶೀಲಾ ಶಂಕರ ಸಾಗಿ ಬಂದ ದಾರಿ' ಗ್ರಂಥ ಜನರ ಆರೋಗ್ಯಕ್ಕಾಗಿ ಉತ್ತಮ ಸಲಹೆಗಳನ್ನೊಳಗೊಂಡಿದೆ. ವೈದ್ಯರಾಗಿ ಜನರ ಆರೋಗ್ಯ ಕಾಪಾಡುವ ಜತೆಗೆ ೭೫ ವರ್ಷವಾದರೂ ಅವರ ಉತ್ಸಾಹ, ಜನಪರ ಕಾಳಜಿ ಪ್ರೇರಣಾದಾಯಿಕ.
| ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು
ಅಧ್ಯಕ್ಷರು, ಅನುಭವ ಮಂಟಪ ಟ್ರಸ್ಟ್