

ಬಳ್ಳಾರಿ : ಆಡಂಭರ ಜೀವನಕ್ಕೆ ಒತ್ತು ನೀಡದೇ ಸರಳ ಜೀವನ ನಡೆಸಲು ಬ್ರಹ್ಮಶ್ರೀನಾರಾಯಣ ಗುರು ಅವರ ಆದರ್ಶ-ತತ್ವಗಳನ್ನು ಪಾಲಿಸೋಣ ಎಂದು ಮೇಯರ್ ಮುಲ್ಲಂಗಿ ನಂದೀಶ್ ಹೇಳಿದರು.
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬ್ರಹ್ಮಶ್ರೀನಾರಾಯಣ ಗುರು ಅವರು ಒಂದೇ ಜಾತಿ, ಒಂದೇ ಮತ, ಒಬ್ಬರೇ ದೇವರು ಎನ್ನುವ ಸಾರವನ್ನು ಜನ ಸಾಮಾನ್ಯರಿಗೆ ತಿಳಿಸುತ್ತಾ, ಸಕಲರಲ್ಲಿಯೂ ಸಾಮರಸ್ಯ ಭಾವನೆ ಮೂಡಿಸಿದವರು. ಸಮಾಜದಲ್ಲಿನ ಅನಿಷ್ಠ ಪದ್ಧತಿಗಳ ನಿರ್ಮೂಲನೆ ಮಾಡಲು ಪಣತೊಟ್ಟರು. ಸಾರ್ವಜನಿಕರನ್ನು ಅಜ್ಞಾನದಿಂದ ಜ್ಞಾನದೆಡೆಗೆ ನಡೆಸಿ, ಸ್ವಸ್ಥ ಸಮಾಜ ನಿರ್ಮಾಣ ಗುರಿ ಹೊಂದಿದ್ದರು ಎಂದು ಹೇಳಿದರು.
ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಮಾತನಾಡಿ, ನಾರಾಯಣ ಗುರು ಅವರು ಹಿಂದುಳಿದ, ದೀನ ದಲಿತರ ರುವಾರಿ ಹಾಗೂ ಮೂಡ ನಂಬಿಕೆ, ಜೀತ ಪದ್ಧತಿ, ದೇವದಾಸಿ ಪದ್ಧತಿ, ಸತಿ ಸಹಗಮನ ಪದ್ಧತಿ ಸೇರಿದಂತೆ ಅನೇಕ ಸಾಮಾಜಿಕ ಶೋಷಣೆಗಳ ವಿರುದ್ಧ ಧ್ವನಿ ಎತ್ತಿದವರು. ಅವರ ಕಾರ್ಯ ಸಾಧನೆ ಶ್ಲಾಘನೀಯ ಎಂದು ಹೇಳಿದರು.
ಸಹಾಯಕ ಪ್ರಾಧ್ಯಾಪಕ ಆಲಂಭಾಷ ವಿಶೇಷ ಉಪನ್ಯಾಸ ನೀಡಿದರು. ಬಳಿಕ ಬಳ್ಳಾರಿಯ ಸಾಯಿಶೃತಿ ಅವರ ವಚನ ಸಂಗೀತವು ಕಾರ್ಯಕ್ರಮದಲ್ಲಿ ಸಂಗೀತ ಕಡಲಲ್ಲಿ ತೇಲಿಸಿತು.