

ಕುರುಗೋಡು: ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಿ ಆರೋಗ್ಯ ಹಾಳುಮಾಡಿಕೊಳ್ಳದೆ ಉತ್ತಮ ಶಿಕ್ಷಣ ಪಡೆದು ಆದರ್ಶ ಜೀವನ ನಡೆಸಬೇಕು ಎಂದು ಶಿಕ್ಷಕ ಬಿ.ಅರುಣ್ ಕುಮಾರ್ ಸಲಹೆ ನೀಡಿದರು.
ಕಲ್ಲುಕಂಬ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ದೇಶದ ಭವಿಷ್ಯ ಮತ್ತು ಅಭಿವೃದ್ಧಿ ಯುವಕರ ಮೇಲಿದ್ದು, ಅದಕ್ಕಾಗಿ ವಿದ್ಯಾರ್ಥಿಗಳು ಶ್ರಮವಹಿಸಿ ವಿದ್ಯಾಭ್ಯಾಸ ಮಾಡಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಎಸ್.ರಾಮು ಮಾತನಾಡಿ, ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾಗಿದ್ದು, ವಿದ್ಯಾರ್ಥಿಗಳ ಸಾಧನೆ ಪಾಲಕರ ಸಂತೋಷಕ್ಕೆ ಕಾರಣವಾಗಲಿದೆ ಎಂದರು. ಶಿಕ್ಷಕಿ ಶಿವಲೀಲಾ, ಸಂಸ್ಥೆಯ ಮೇಲ್ವಿಚಾರಕ ಮಹಾಂತೇಶ್, ಸೇವಾ ಪ್ರತಿನಿಧಿ ಹನುಮಾವತಿ ಇದ್ದರು.