

ವಿಜಯವಾಣಿ ಸುದ್ದಿಜಾಲ ಧಾರವಾಡ
ಎಲ್ಲ ಲಿಂಗಾಯತರು ತಮ್ಮ ದುಡಿಮೆಯ ಒಟ್ಟು ಆದಾಯದಲ್ಲಿ ವರ್ಷಕ್ಕೆ ಶೇ. 2ರಿಂದ 4ರಷ್ಟು ಹಣವನ್ನು ಲಿಂಗಾಯತ ಧರ್ಮಗಳ ಅಭಿವೃದ್ಧಿಗೆ ಕೊಡುಗೆ ನೀಡಿದರೆ ಸಮಾಜ ಸುಧಾರಣೆಗೆ ಸಾಕಷ್ಟು ಒತ್ತು ಕೊಟ್ಟಂತಾಗಲಿದೆ ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ ಅಭಿಪ್ರಾಯಪಟ್ಟರು.
ನಗರದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಸೋಮವಾರ ಏರ್ಪಡಿಸಿದ್ದ ಸಂಸ್ಥೆಯ 142ನೇ ಸಂಸ್ಥಾಪನಾ ದಿನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಲಿಂಗಾಯತರು ಒಳ ಪಂಗಡಗಳನ್ನು ಮರೆತು ಒಟ್ಟಾಗಿ ಸಾಗಿದಾಗ ಸಮಾಜಕ್ಕೆ ದೊಡ್ಡ ಬಲ ಸಿಕ್ಕಂತಾಗಲಿದೆ. ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ 142 ವರ್ಷಗಳ ಶೈಕ್ಷಣಿಕ ಪ್ರಯಾಣ ಶ್ಲಾಘನೀಯ. ಈ ಸಂಸ್ಥೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಹೊಂದಲಿ ಎಂದು ಆಶಿಸಿದರು.
ತಹಸೀಲ್ದಾರ ಡಾ. ಡಿ.ಎಚ್. ಹೂಗಾರ ಮಾತನಾಡಿ, ನಮ್ಮ ಪೂರ್ವಜರು ತಮ್ಮ ಆಸ್ತಿಗಳನ್ನು ಮಾರಿ, ಇಲ್ಲವೇ ಅಡವಿಟ್ಟು ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿ ಉತ್ತರ ಕರ್ನಾಟಕದ ಶೈಕ್ಷಣಿಕ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಅವರ ಆಶಯದಂತೆ ಬಡ ಮತ್ತು ಶೋಷಿತ ವರ್ಗದ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಸಿಗುವಂತಾಗಬೇಕು ಎಂದರು.
ಡಾ. ಎಸ್.ಆರ್.ಗುಂಜಾಳ, ಸಂಸ್ಥೆಗೆ ಸೇವೆ ಸಲ್ಲಿಸಿದವರ ವಂಶಸ್ಥರಾದ ರಾಜಶೇಖರ ಭೋಜ, ವಿಜಯಕುಮಾರ ಮೋಹನ ಶಿಂತ್ರೆ ಅವರಿಗೆ ಸನ್ಮಾನಿಸಲಾಯಿತು. ಸಂಸ್ಥೆ ಅಧ್ಯಕ್ಷ ಡಾ. ಎಸ್.ಎಸ್. ಭಾವಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆ ಉಪಾಧ್ಯಕ್ಷ ವೀರಣ್ಣ ಯಳಲ್ಲಿ, ಕಾರ್ಯಾಧ್ಯಕ್ಷ ಆರ್.ಯು. ಬೆಳ್ಳಕ್ಕಿ, ಜಂಟಿ ಕಾರ್ಯದರ್ಶಿ ಶಿವಪುತ್ರ ಅಗಡಿ, ಬಿ.ಎಸ್. ತಾಳಿಕೋಟಿ, ಅವ್ವಪ್ಪಣ್ಣ ಅತ್ತಿಗೇರಿ ಕೈಗಾರಿಕಾ ತರಬೇತಿ ಅಧೀಕ್ಷಕ ಶಿವಲಿಂಗ ನೀಲಗುಂದ, ಇತರರು ಇದ್ದರು.
ಸಿ.ಬಿ.ಮಟ್ಟಿ ಸ್ವಾಗತಿಸಿದರು. ಎಸ್.ಎಂ.ಹೂಗಾರ ವಂದಿಸಿದರು.