ಆತ್ಮಹತ್ಯೆಗೆ ಯತ್ನಿಸಿದ ರೈತನ ಭೇಟಿ

Vijayendra Visit 1
Published on

ಬೆಳಗಾವಿ: ರಾಜ್ಯ ಸರ್ಕಾರ ಕಣ್ಣಿದ್ದೂ ಕುರುಡ, ಕಿವಿ ಇದ್ದೂ ಕಿವುಡನಂತಾಗಿದ್ದು, ರೈತರು ಮತ್ತು ಹೋರಾಟಗಾರರ ವಿಚಾರದಲ್ಲಿ ಯಾವ ರಾಜ್ಯದ ಸರ್ಕಾರವೂ ಇಷ್ಟು ನಿರ್ಲಕ್ಷ್ಯ ಮನೋಭಾವ ಹೊಂದಿರಲಿಲ್ಲ. ಸರ್ಕಾರ ಅಧಿಕಾರದ ಮದದಲ್ಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ಗುರ್ಲಾಪುರ ಕ್ರಾಸ್‌ನಲ್ಲಿ ಎರಡು ದಿನಗಳ ಹಿಂದೆ ಕಬ್ಬು ಬೆಳೆಗಾರರ ಹೋರಾಟದಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥರಾಗಿ ಇಲ್ಲಿನ ಕೆಎಲ್‌ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೈತ ಲಕ್ಕಪ್ಪ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಡ ರೈತ ಲಕ್ಕಪ್ಪ ಆತ್ಮಹತ್ಯೆಗೆ ಪ್ರಯತ್ನಿಸಿ, ಅಸ್ವಸ್ಥರಾಗಿದ್ದಾರೆ. ಕುಟುಂಬ ಸದಸ್ಯರಿಗೆ ಗೊತ್ತಾಗದಂತೆ ಅಧಿಕಾರಿಗಳು ಅವರನ್ನು ಬೆಳಗಾವಿಗೆ ಸ್ಥಳಾಂತರಿಸಿದ್ದಾರೆ. ಸರ್ಕಾರದ ಯಾವುದೇ ಪ್ರತಿನಿಧಿಗಳು ಆತ್ಮಹತ್ಯೆಗೆ ಯತ್ನಿಸಿದ ರೈತನನ್ನು ಭೇಟಿಯಾಗಿಲ್ಲ. ರೈತರ ಆರೋಗ್ಯ ವಿಚಾರಿಸುವ ಸಾಮಾನ್ಯ ಅರಿವು ಸಹ ಕಾಂಗ್ರೆಸ್ ಸರ್ಕಾರಕ್ಕಿಲ್ಲ. ಇನ್ನಾದರೂ ಸರ್ಕಾರ ರೈತನ ಕುಟುಂಬಕ್ಕೆ ಧೈರ್ಯ ಹೇಳುವ ಕೆಲಸ ಮಾಡಬೇಕು ಎಂದರು.

ರೈತ ಲಕ್ಕಪ್ಪನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ವಿಷ ಸೇವಿಸಿರುವುದರಿಂದ ಹೃದಯ ಮತ್ತು ಶ್ವಾಸಕೋಸದ ಮೇಲೆ ತೀವ್ರ ಪರಿಣಾಮ ಬೀರಿದೆ. ಭಗವಂತನ ಕೃಪೆಯಿಂದ ಅವರು ಸರಿ ಹೋಗುತ್ತಾರೆಂಬ ವಿಶ್ವಾಸವಿದೆ. ಇಂತಹ ಸ್ಥಿತಿ ನೋಡಿಯಾದರೂ ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ಆರಂಭವಾಗಿ 7 ದಿನ ಕಳೆದರೂ ರಾಜ್ಯ ಸರ್ಕಾರ ಇತ್ತ ಗಮನಹರಿಸಿರಲಿಲ್ಲ. ಉಸ್ತುವಾರಿ ಸಚಿವರು ಜಿಲ್ಲೆಯಲ್ಲೇ ಇದ್ದರೂ ಹೋರಾಟಗಾರರನ್ನು ಮಾತನಾಡಿಸುತ್ತಿಲ್ಲ. ಸಕ್ಕರೆ ಸಚಿವರು ಈ ಕಡೆ ತಲೆಯೂ ಹಾಕಿಲ್ಲ. ರೈತರು, ಕಬ್ಬು ಬೆಳೆಗಾರರನ್ನು ರಾಜ್ಯ ಸರ್ಕಾರ ಹಗುರವಾಗಿ ಪರಿಗಣಿಸಿದೆ.

ಇದೆಲ್ಲವನ್ನೂ ನೋಡಿಯೇ ಹೋರಾಟಕ್ಕೆ ಬಂದಿದ್ದೇನೆ. ಈಗ ಸರ್ಕಾರ ಸಚಿವರನ್ನು ಕಳುಹಿಸಿಕೊಡುವ ಕೆಲಸ ಮಾಡಿದೆ. ನಮ್ಮ ಪಕ್ಷದ ನಾಯಕರು ಮತ್ತು ಕಾಂಗ್ರೆಸ್ ನಾಯಕರ ಮಾಲೀಕತ್ವದಲ್ಲಿ ಹಲವು ಸಕ್ಕರೆ ಕಾರ್ಖಾನೆಗಳಿವೆ. ನಾನು ನಮ್ಮವರ ಕಾರ್ಖಾನೆಗಳಿವೆಂದು ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ರೈತರ ಪರ ಹೋರಾಟಕ್ಕೆ ಇಳಿದಿದ್ದೇನೆ. ಸರ್ಕಾರ ಇನ್ನಾದರೂ ರೈತರ ಬೇಡಿಕೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಎಂಎಲ್‌ಸಿ ಮಹಾಂತೇಶ ಕಟವಗಿಮಠ, ಸುಭಾಷ ಪಾಟೀಲ, ಎಂ.ಬಿ.ಝೀರಲಿ, ಮುರೇಂದ್ರಗೌಡ ಪಾಟೀಲ, ಹನುಮಂತ ಕೊಂಗಾಲಿ, ಮಲ್ಲಣ್ಣ ಯಾದವಾಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net