

ಮದ್ದೂರು: ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ಪ್ರಭಾರ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂ.ಸೋಮಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಬೆಸಗರಹಳ್ಳಿ ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮಾರಸಿಂಗನಹಳ್ಳಿ, ಮುದಿಗೆರೆ, ನಿಲುವಾಗಿಲು, ಮುಳ್ಳಹಳ್ಳಿ, ಹೊಸಕೆರೆ, ನಾಗನದೊಡ್ಡಿ, ಅರೆಕಲ್ ದೊಡ್ಡಿ, ಪಣ್ಣೆದೊಡ್ಡಿ ಗ್ರಾಮಗಳ ನಿವಾಸಿಗಳು ಪೊಲೀಸ್ ಠಾಣೆ ಬಳಿ ಸೋಮವಾರ ಜಮಾಯಿಸಿ ಮನವಿ ಸಲ್ಲಿಸಿದರು. ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡು ತಪ್ಪಿತಸ್ಥ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ವಕೀಲ ಸತ್ಯಪ್ಪ ಮಾತನಾಡಿ, ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘದಲ್ಲಿ ಪ್ರಭಾರ ಕಾರ್ಯದರ್ಶಿಯಾಗಿದ್ದ ಎಂ.ಸೋಮಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಆದ್ದರಿಂದ ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಎಂ.ಸೋಮಶೇಖರ್ ಅವರನ್ನೇ ನಂಬಿಕೊಂಡಿದ್ದ ಕುಟುಂಬ ಸದಸ್ಯರಿಗೆ ಸರ್ಕಾರ ಸೂಕ್ತ ಪರಿಹಾರ ಕೊಡಿಸಿಕೊಡಬೇಕೆಂದು ಆಗ್ರಹಿಸಿದರು.
ಸಂಘದ ಕಾರ್ಯದರ್ಶಿ ಎಂ.ಸೋಮಶೇಖರ್ ಅವರ ಮೇಲೆ ಕೆಲವರು ಸಂಘದ ಕಾರ್ಯದಲ್ಲಿ ಅನಗತ್ಯವಾಗಿ ಒತ್ತಡ ತಂದು ಕೆಲಸ ಮಾಡಿಸಿಕೊಡಿಸುವ ಸಲುವಾಗಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು. ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘದ ವಿಸ್ತರಣಾಧಿಕಾರಿಗಳು ಸಂಘದಲ್ಲಿ ಅವ್ಯವಹಾರ ಮಾಡಿದ್ದೀರಿ ಎಂದು ನೋಟಿಸ್ ನೀಡಿದ್ದರು. ತಾನು ಯಾವುದೇ ತಪ್ಪು ಮಾಡದಿದ್ದರೂ ತನಗೆ ನೋಟಿಸ್ ನೀಡಿದ್ದಾರೆ ಎಂಬ ಕಾರಣಕ್ಕೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಪ್ರಕರಣ ಸಂಬಂಧ ಎಂ.ಸೋಮಶೇಖರ್ ಅವರ ಪುತ್ರ ಕೂಡ ಇದು ಅನುಮಾನಾಸ್ಪದ ಸಾವು ಎಂದು ಬೆಸಗರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದ್ದರಿಂದ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಗೌಡ, ಈಗಾಗಲೇ ಎಂ.ಸೋಮಶೇಖರ್ ಅವರ ಆತ್ಮಹತ್ಯೆ ಸಂಬಂಧ ಪ್ರಕರಣ ದಾಖಲಾಗಿದೆ. ಈ ಸಂಬಂಧ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಮುಖಂಡರಾದ ಡಿ.ಪಿ.ಧನಂಜಯ ಪಣ್ಣೆದೊಡ್ಡಿ, ಅಡ್ಡ ರಸ್ತೆ ಗೋಪಿ, ಸುಧಾಕರ್, ಶೇಖರ್, ಪುಟ್ಟಸ್ವಾಮಿ, ಕೃಷ್ಣ, ಗಂಗಾಧರ್, ಮನುರಾಜ್, ಶಿವರಾಮು, ಅಂಕಪ್ಪ, ರಮೇಶ್, ಶಿವಲಿಂಗಯ್ಯ, ಶ್ರೀಕಾಂತ್, ಉಮೇಶ್ ಇತರರು ಇದ್ದರು.