ದರ್ಶನ್ ಫಾರ್ಮ್‌ಹೌಸ್‌ನ ರೈಟರ್ ಆತ್ಮಹತ್ಯೆ ಕೇಸ್‌ಗೆ ಮರುಜೀವ?

oplus_1048578
oplus_1048578
Published on

ವಿಜಯವಾಣಿ ಸುದ್ದಿಜಾಲ ಆನೇಕಲ್
ತಾಲೂಕಿನ ಬಗ್ಗನದೊಡ್ಡಿಯಲ್ಲಿರುವ ನಟ ದರ್ಶನ್ ಅವರ ಫಾರ್ಮ್‌ಹೌಸ್‌ನಲ್ಲಿ ರೈಟರ್ ಕೆಲಸ ಮಾಡುತ್ತಿದ್ದ ಶ್ರೀಧರ್ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕಾಗಿದ್ದು, ರೇಣುಕಸ್ವಾಮಿ ಕೊಲೆ ಆರೋಪದಲ್ಲಿ ಬಂಧಿತನಾಗಿರುವ ಚಾಲೆಂಜಿಗ್ ಸ್ಟಾರ್‌ಗೆ ಮತ್ತಷ್ಟು ಕಂಟಕ ಎದುರಾಗುವ ಸಾಧ್ಯತೆ ಇದೆ.
ಬಗ್ಗನದೊಡ್ಡಿಯ ದರ್ಶನ್ ದುರ್ಗಾ
ಫಾರ್ಮ್‌ಹೌಸ್‌ನಲ್ಲಿ ರೈಟರ್ ಆಗಿದ್ದ ಶ್ರೀಧರ್ ಏಪ್ರಿಲ್ 17ರಂದು ಸೆಲ್ಫಿ ವಿಡಿಯೋ ಮಾಡಿ, ಡೆತ್ ನೋಟ್ ಬರೆದಿಟ್ಟು ‘ನನ್ನ ಸಾವಿಗೆ ನಾನೇ ಕಾರಣ. ಯಾರಿಗೂ ನನ್ನ ಸಾವಿನ ನಂತರ ತೊಂದರೆ ಕೊಡಬೇಡಿ’ ಎಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆದರೆ ಈ ಪ್ರಕರಣದಲ್ಲಿ ಆನೇಕಲ್ ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ಮಾಡಿಲ್ಲ ಎನ್ನಲಾಗಿದ್ದು, ದರ್ಶನ್‌ಗೆ ಈವರೆಗೆ ಯಾವುದೇ ನೋಟಿಸ್ ಕೊಟ್ಟಿಲ್ಲ ಎನ್ನುವ ದೂರುಗಳು ಕೇಳಿ ಬಂದಿವೆ.
ಶ್ರೀಧರ್ ಆತ್ಮಹತ್ಯೆ ಮಾಡಿಕೊಂಡ ಮರು ದಿನವೇ ಈತನ ಸ್ನೇಹಿತ ಆನೇಕಲ್ ಪೊಲೀಸರಿಗೆ ಮಾಹಿತಿ ತಿಳಿಸಿದ್ದ. ಸ್ಥಳಕ್ಕೆ ಹೋದ ಪೊಲೀಸರಿಗೆ ಶ್ರೀಧರ್ ಕಲ್ಲಿನ ಮೇಲೆ ಮಲಗಿ ರಕ್ತಕಾರಿ ಸತ್ತಿರುವುದು ಕಂಡು ಬಂದಿತ್ತು. ಬಳಿಕ ಆನೇಕಲ್ನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಶವ ಹಸ್ತಾಂತರ ಮಾಡಿದ್ದರು.

ಶ್ರೀಧರ್ ಸಾವಿನ ಮರು ತನಿಖೆ ಸಂಭವ: ಯಾವುದೋ ಕಾರಣದಿಂದ ಒಂಟಿತನ ಕಾಡುತ್ತಿದೆ, ಬದುಕುವ ಆಸೆ ಇಲ್ಲ. ನನ್ನ ಸಾವಿಗೆ ನಾನೇ ಕಾರಣ. ಪೊಲೀಸರು ನನ್ನ ಸಾವಿನ ವಿಷಯ ಇಟ್ಟುಕೊಂಡು ಸ್ನೇಹಿತರು, ಕುಟುಂಬ ಸದಸ್ಯರು ಸೇರಿ ಯಾರೊಬ್ಬರಿಗೂ ತೊಂದರೆ ಕೊಡಬೇಡಿ. ಮನೆಯಲ್ಲಿ ಅಪ್ಪ-ಅಮ್ಮ ಸಹೋದರಿಯರಿಗೆ ಸೇರಿ ಎಲ್ಲರಿಗೂ ಹೇಳುತ್ತಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟು ಶ್ರೀಧರ್ ಸಾಯುವ ಮುನ್ನ ಹೇಳುತ್ತಿರುವ ವಿಡಿಯೋ ಬಗ್ಗೆಯೂ ಹಲವು ಅನುಮಾನ ಕಾಡುತ್ತಿದೆ. ಅಲ್ಲದೆ ಇದೀಗ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಅವರ ಹಳೆಯ ಪ್ರಕರಣಗಳನ್ನು ಸಹ ಪೊಲೀಸರು ಜಾಲಾಡುತ್ತಿದ್ದು, ಶ್ರೀಧರ್ ಆತ್ಮಹತ್ಯೆ ಪ್ರಕರಣದ ಮರು ತನಿಖೆ ನಡೆಯುವ ಸಂಭವ ಇದೆ ಎನ್ನಲಾಗಿದೆ.
ಫಾರ್ಮ್‌ಹೌಸ್ ಕೊಡಿಸಿದ್ದು ಬಿಜೆಪಿ ಶಾಸಕ: ಬಗ್ಗನದೊಡ್ಡಿ ಬಳಿ ಇರುವ ಫಾರ್ಮ್‌ಹೌಸ್ ಪೂಜೆಗೆ ದರ್ಶನ್ ಕಳೆದ ಎರಡು ತಿಂಗಳ ಹಿಂದೆ ಬಂದು ಹೋಗಿದ್ದರು ಎನ್ನಲಾಗಿದ್ದು, ದರ್ಶನ್ ಬಂದಾಗಲೂ ಶ್ರೀಧರ್ ಇಲ್ಲೇ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಬಗ್ಗನದೊಡ್ಡಿ ಬಳಿ ದರ್ಶನ್ ಒಡೆತನದ ಫಾರ್ಮ್‌ಹೌಸ್ ನಿರ್ಮಾಣ ಹಂತದಲ್ಲಿದ್ದು, ಬಿಜೆಪಿ ಶಾಸಕರೊಬ್ಬರು ತಮ್ಮ ಪರ ದರ್ಶನ್ ಚುನಾವಣಾ ಪ್ರಚಾರಕ್ಕೆ ಬಂದರು ಎಂಬ ಕಾರಣಕ್ಕೆ ಈ ಜಮೀನನ್ನು ಕೊಡಿಸಿದ್ದರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಸರಿಯಾದ ರೀತಿ ತನಿಖೆ ಆಗಿದೆ: ಬಗ್ಗನದೊಡ್ಡಿ ಬಳಿ ಇರುವ ಫಾರ್ಮ್‌ಹೌಸ್ ನಟ ದರ್ಶನ್ ಒಡೆತನದಲ್ಲಿದ್ದರೂ, ಶ್ರೀಧರ್ ರೈಟರ್ ಕೆಲಸ ಮಾಡುತ್ತಿದ್ದ ಕನ್‌ಸ್ಟ್ರಕ್ಷನ್ ಕಂಪನಿ ಬೇರೆಯವರದ್ದು ಎನ್ನಲಾಗಿದೆ. ಈ ಕಂಪನಿಯಲ್ಲಿ ಶ್ರೀಧರ್ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದ್ದು, ಪೊಲೀಸರು ಈ ಪ್ರಕರಣದಲ್ಲಿ ಎ್ಎಸ್‌ಎಲ್ ತಂಡವನ್ನು ಕರೆಸಿ ಸ್ಯಾಂಪಲ್ ಕಲೆ ಹಾಕಿದ್ದು, ಈ ಪ್ರಕರಣದಲ್ಲಿ ಸರಿಯಾದ ರೀತಿಯಲ್ಲಿ ತನಿಖೆ ಮಾಡಲಾಗಿದೆ ಎನ್ನುತ್ತಾರೆ ಆನೇಕಲ್ ಪೊಲೀಸರು.
ಎ್ಎಸ್‌ಎಲ್ ವರದಿಗೆ ಕೆಲ ಸ್ಯಾಂಪಲ್ ಕಳುಹಿಸಲಾಗಿದ್ದು, ಆ ವರದಿ ಇನ್ನೂ ಬಂದಿಲ್ಲ. ಬಂದ ನಂತರ ಮುಂದಿನ ತನಿಖೆ ಕೈಗೊಳ್ಳುತ್ತೇವೆ, ಆತನೇ ನನ್ನ ಸಾವಿಗೆ ಜೀವನದಲ್ಲಿ ಬೇಸರವೇ ಕಾರಣ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಲ್ಲಿಕಾರ್ಜುನ್ ಬಾಲದಂಡಿ , ಬೆಂಗಳೂರು ಗ್ರಾಮಾಂತರ ಎಸ್‌ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net