

ವಿಜಯವಾಣಿ ಸುದ್ದಿಜಾಲ ಧಾರವಾಡ
ರೈತ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬೇಕು. ಕೃಷಿಯಲ್ಲಿ ಹೊಸ ಹೊಸ ಆವಿಷ್ಕಾರ ಹಾಗೂ ನೂತನ ಕೃಷಿ ಸಂಶೋಧನೆಗಳನ್ನು ಅಳವಡಿಸಿಕೊಂಡು ಕೃಷಿಯನ್ನು ಸುಸ್ಥಿರಗೊಳಿಸಬೇಕು ಎಂದು ಹತ್ತಿಮತ್ತೂರು ವಿರಕ್ತಮಠದ ಶ್ರೀ ನಿಜಗುಣ ಶಿವಯೋಗಿಗಳು ಹೇಳಿದರು.
ನಗರದ ಕೃಷಿ ವಿಶ್ವ ವಿದ್ಯಾಲಯದ ಕೃಷಿ ಮೇಳದಲ್ಲಿ ಭಾನುವಾರ ಆಯೋಜಿಸಿದ್ದ ರೈತರಿಂದ ರೈತರಿಗಾಗಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಪಿ.ಎಲ್. ಪಾಟೀಲ ಮಾತನಾಡಿ, ಕೃವಿವಿ ನಿರಂತರ 25 ವರ್ಷಗಳಿಂದ ವಿನೂತನ ಕಾರ್ಯಕ್ರಮ ಏರ್ಪಡಿಸುತ್ತಿದೆ. ರೈತರು ನಿತ್ಯದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ಹೊಸತನ ಕಂಡುಕೊಳ್ಳಲು ನೂತನ ಅವಿಷ್ಕಾರಗಳೊಂದಿಗೆ ಕೃಷಿ ಚಟುವಟಿಕೆಗಳನ್ನು ಹಗುರಗೊಳಿಸಬೇಕು. ಇಂತಹ ಸಾಧನೆ ಮಾಡಿದ ಅನೇಕ ರೈತರು ಈಗಾಗಲೇ ಮಾದರಿಯಾಗಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿದ ಆವಿಷ್ಕಾರಿ ರೈತರಾದ ಲೋಕಾಪುರದ ಸಿದ್ದು ಚೌಧರಿ, ಯಲ್ಲಾಪುರದ ತಿಮ್ಮಣ್ಣ ಭಟ್, ಬೈಲಹೊಂಗಲ ತಾಲೂಕಿನ ರವೀಂದ್ರ ಸಿದ್ನಾಳ ಹಾಗೂ ಮುಧೋಳ ತಾಲೂಕಿನ ಶ್ರೇಷ್ಠ ಕೃಷಿ ಮಹಿಳೆ ಕಾವೇರಿ ಗಣಿ ಅನುಭವ ಹಂಚಿಕೊಂಡರು.
ಕೃವಿವಿ ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳು, ಇತರರು ಇದ್ದರು. ಡಾ. ಶ್ರೀಪಾದ ಕುಲಕರ್ಣಿ ಸ್ವಾಗತಿಸಿದರು. ಡಾ. ಎಸ್.ಎ. ಬಿರಾದಾರ ವಂದಿಸಿದರು.