

ಕಡೂರು: ವಿದ್ಯಾರ್ಥಿಗಳಿಗೆ ಆತ್ಮಸಾಕ್ಷಿಯಿಂದ ಬದುಕುವ ಶಿಕ್ಷಣ ಬೇಕಿದೆ. ಅದು ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳಲ್ಲಿ ಸ್ವಲ್ಪ ಕಾಣಲು ಸಾಧ್ಯ ಎಂದು ಕರ್ನಾಟಕ ಲೋಕಾಸೇವಾ ಆಯೋಗದ ಸದಸ್ಯ ಡಾ. ಎಚ್.ಎಸ್.ಭೋಜ್ಯನಾಯ್ಕ ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್, ರೋವರ್ಸ್ ಮತ್ತು ರೇಂಜರ್ಸ್, ಯುವ ರೆಡ್‌ಕ್ರಾಸ್ ಘಟಕಗಳ ಸಮಾರೋಪದಲ್ಲಿ ಮಾತನಾಡಿ, ಜೀವನದಲ್ಲಿ ಪ್ರತಿಯೊಬ್ಬರಿಗೂ ಅವಕಾಶಗಳು ಬರಲಿವೆ. ಅದರ ಸದುಪಯೋಗ ಪಡೆದುಕೊಳ್ಳಬೇಕಿದೆ. ಪ್ರತಿಯೊಬ್ಬರಲ್ಲಿಯೂ ಸ್ವಾವಲಂಬನೆ ಬದುಕು ಸಾಗಿಸಬೇಕು ಎಂದರು.
ಸಮಾಜಕ್ಕೆ ಒಳಿತು ಮಾಡುವ ಗುಣ ಹೊಂದಿರಬೇಕು. ದೇಶದ 200 ವಿವಿಗಳಿಂದ ಕೋಟಿಗಟ್ಟಲೆ ವಿದ್ಯಾರ್ಥಿಗಳು ಪ್ರತಿ ವರ್ಷ ಕಲಿತು ಹೊರ ಬರುತ್ತಾರೆ. ರ‌್ಯಾಂಕ್ ಪಡೆಯದಿದ್ದರೂ ಜೀವನ ಸಾಗಿಸಬಹುದು. ಗ್ರಾಮೀಣ ಭಾಗದ ಮಕ್ಕಳಿಗೆ ಜೀವನದ ಮಹತ್ವ ಗೊತ್ತಿದೆ ಎಂದರು.
ಇನ್‌ಸೈಟ್ ಆ್ಯಕ್ಟಿವ್ ಲರ್ನಿಂಗ್ ಸಂಸ್ಥೆಯ ಬೆಂಗಳೂರಿನ ಸಂಸ್ಥಾಪಕ ನಿರ್ದೇಶಕ ಜಿ.ಬಿ.ವಿನಯ್‌ಕುಮಾರ್ ಮಾತನಾಡಿ, ಆಂತರಿಕ ಶಕ್ತಿ ಅರ್ಥ ಮಾಡಿಕೊಂಡರೆ ನೀವು ಸಹ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾಗಬಹುದು. ರಾಜಕಾರಣಿಗಳು, ಶ್ರೀಮಂತರು, ಸಿನಿಮಾ ನಟರ ಹಿಂಬಾಲಕರಾಗದೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಸಾಧನೆ ಮಾಡಿ. ಗ್ರಂಥಾಲಯ ಸಂಸ್ಕೃತಿ ಮರೆಯಾಗುತ್ತಿದೆ. ವಿದ್ಯಾರ್ಥಿಗಳು ಪುಸ್ತಕ, ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಪ್ರಾಂಶುಪಾಲ ಡಾ. ಕೆ.ಎ.ರಾಜಣ್ಣ, ಕೆಂಪಸಿದ್ದಯ್ಯ, ಎಸ್.ಜಿ.ಕುಮಾರ, ಜೆ.ತಿಮ್ಮರಾಜು, ಎಚ್.ಆರ್.ಜ್ಯೋತಿ, ಸಂಪತ್‌ಕುಮಾರ್, ವೈ.ಜಿ.ನಾಗೇಶ್, ಎ.ಸುನೀತಾ ಇತರರಿದ್ದರು.