

ಶೃಂಗೇರಿ: ವಿದ್ಯಾರ್ಥಿಗಳಿಗೆ ಜ್ಞಾನ ಎಂಬುದು ಜೀವನದಲ್ಲಿ ಸಿಗುವ ಅತ್ಯುತ್ತಮ ಮೌಲ್ಯ. ಆದರೆ ಮಕ್ಕಳು ಪರೀಕ್ಷೆಯ ಭಯದಿಂದ ಲಿತಾಂಶದಲ್ಲಿ ಹಿನ್ನಡೆ ಅನುಭವಿಸುತ್ತಾರೆ. ಆತ್ಮವಿಶ್ವಾಸ ಹಾಗೂ ಗುರುವಿನ ಕೃಪೆಯಿಂದ ಸಾಧನೆ ಹಾದಿ ತಲುಪಲು ಸಾಧ್ಯ ಎಂದು ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.
ಬಿಜಿಎಸ್ ದರ್ಶಿನಿ ಸಂಯುಕ್ತ ಪ್ರೌಢಶಾಲೆ ಮಂಗಳವಾರ ಜಿಲ್ಲಾ ಬಿಜಿಎಸ್ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ವಿಜಯಂಗಮ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗುರಿ ಮುಟ್ಟಲು ವಿದ್ಯಾರ್ಥಿಗಳು ಆಸಕ್ತ ಕ್ಷೇತ್ರವನ್ನು ಆಯ್ಕೆಮಾಡಿಕೊಳ್ಳಲು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಹಳ ಮುಖ್ಯ. ಯಾವುದೇ ಗೊಂದಲಗಳನ್ನು ಸೃಷ್ಟಿಸಿಕೊಳ್ಳದೆ ಕರ್ತವ್ಯವನ್ನು ಸಮಚಿತ್ತದಿಂದ ಮಾಡಬೇಕು. ಯಾರ ಪ್ರಜ್ಞೆಯಲ್ಲಿ ದಿವ್ಯತ್ವವಿದೆಯೋ ಅವನಿಗೆ ಯಶಸ್ಸು ಸುಲಲಿತವಾಗಿ ದೊರಕುತ್ತದೆ ಎಂದರು.
ಮನಶಾಸ್ತ್ರಜ್ಞೆ ಚಂದ್ರಕುಮಾರಿ ಮಾತನಾಡಿ, ಪರೀಕ್ಷೆ ಸಮಯದಲ್ಲಿ ಹೆಚ್ಚಿನ ಒತ್ತಡ ಬೀಳದಂತೆ ವಿದ್ಯಾರ್ಥಿಗಳು ದಿನನಿತ್ಯ ಅಭ್ಯಾಸ ಮಾಡಬೇಕು. ಪ್ರತಿ ಅಂಕವೂ ಮುಖ್ಯವಾಗಿದ್ದು, ಪಠ್ಯ ಕ್ರಮದ ಎಲ್ಲ ವಿಷಯವನ್ನು ಸರಿಯಾಗಿ ಮನನ ಮಾಡಿಕೊಳ್ಳಬೇಕು ಎಂದರು.
ಕಾರ್ಯಾಗಾರದಲ್ಲಿ ಚಿಕ್ಕಮಗಳೂರಿನ ಬಿಜಿಎಸ್‌ನ ಎಲ್ಲ ಪ್ರೌಢಶಾಲೆಗಳ 550 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಸಿಇಒ ಕೆ.ಸಿ.ನಾಗೇಶ್, ಕಾಲೇಜು ವಿಜ್ಞಾನ ವಿಭಾಗದ ಡೀನ್ ಸಂಜಯ್ ಮಿರ್ಜಿ, ಬಿಜಿಎಸ್ ದರ್ಶಿನಿ ಸಂಯುಕ್ತ ಪ್ರೌಢಶಾಲೆ ಮುಖ್ಯಶಿಕ್ಷಕ ಕಿರಣ್‌ಕುಮಾರ್, ಪರಿಸರ ತಜ್ಞ ದುಗ್ಗಪ್ಪ ಗೌಡ ಇದ್ದರು.