

ಬಳ್ಳಾರಿ : ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆತ್ಮ ವಿಶ್ವಾಸದ ಜತೆಗೆ ನಿರಂತರ ಅಭ್ಯಾಸ ನಡೆಸಬೇಕು ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಹೇಳಿದರು.
ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಸಹಯೋಗದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಅನುದಾನದಡಿ ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶದ ನಿರುದ್ಯೋಗಿ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹತೆವುಳ್ಳ ಯುವಕ-ಯುವತಿಯರಿಗಾಗಿ ಕೆಎಎಸ್, ಎಫ್‌ಡಿಎ, ಎಸ್‌ಡಿಎ ಪರೀಕ್ಷೆಗಳ ಪೂರ್ವ ತರಬೇತಿ ಆಯ್ಕೆಗಾಗಿ ಬುಧವಾರ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ನಿರಂತರ ಅಭ್ಯಾಸ ಮತ್ತು ಪ್ರಯತ್ನಗಳಿಂದ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ. ಅಡ್ಡಮಾರ್ಗಗಳಿಂದ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಶಾಶ್ವತ ಯಶಸ್ಸು ದೊರಕದು ಎಂದು ಸಲಹೆ ನೀಡಿದರು. ಪ್ರಸ್ತುತ ಇದು ಸ್ಪರ್ಧಾತ್ಮಕ ಯುಗವಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸುವ ಇಚ್ಛಾಶಕ್ತಿ ತೋರಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಪದವಿ ಹಂತದ ವಿದ್ಯಾಭ್ಯಾಸದ ಜತೆಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬೇಕು ಎಂದರು.
ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯೋಜನೆ ರೂಪಿತ ದಿನಚರಿ ಸಿದ್ಧಪಡಿಸಿಕೊಂಡು ವೇಳೆಯ ಪ್ರಕಾರ ಅಭ್ಯಾಸ ಮಾಡಬೇಕು. ಯುಪಿಎಸ್‌ಸಿ ಪರೀಕ್ಷೆಗೆ ಕನ್ನಡ ಭಾಷೆಯಲ್ಲಿಯೂ ಸಹ ಪಠ್ಯಕ್ರಮ ದೊರೆಯಲಿದ್ದು, ಉತ್ತಮ ಮಾರ್ಗದರ್ಶಕರ ದಾರಿಯಲ್ಲಿ ಅಭ್ಯಾಸ ನಿರತರಾಗಬೇಕು ಎಂದರು.
ಬಳಿಕ ಡಿಸಿ ಪ್ರಶಾಂತಕುಮಾರ ಮಿಶ್ರಾ, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ವಿದ್ಯಾರ್ಥಿಗಳೊಡನೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಅಧಿಸಿದಂತೆ ಸಂವಾದ ನಡೆಸಿದರು. 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.