ಆತ್ಮವಿಶ್ವಾಸ, ಏಕಾಗ್ರತೆಯಿಂದ ಸಾಧನೆ ಸಾಧ್ಯ

111 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರ ಪ್ರದೇಶದ ಮಕ್ಕಳಿಗಿಂತ ಗ್ರಾಮೀಣ ಭಾಗದ ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚು. ವಿದ್ಯಾರ್ಥಿಗಳು ಜೀವನದಲ್ಲಿ ಆತ್ಮವಿಶ್ವಾಸ, ಏಕಾಗ್ರತೆಯಿಂದ ಅಧ್ಯಯನ ಮಾಡಿದರೆ ಸಾಧನೆ ಸಾಧ್ಯ ಎಂದು ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಹೇಳಿದರು.
ತಾಲೂಕಿನ ಅಮ್ಮಿನಭಾವಿಯ ಶ್ರೀ ಶಾಂತೇಶ್ವರ ಪ್ರೌಢಶಾಲೆಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ  ಬುಧವಾರ ಆಯೋಜಿಸಿದ್ದ ‘ಅಧ್ಯಯನದಲ್ಲಿ ಏಕಾಗ್ರತೆ ಸಾಧಿಸುವುದು ಹೇಗೆ?’ ಎಂಬ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಎಲ್ಲ ವಿದ್ಯಾರ್ಥಿಗಳಲ್ಲಿ ಒಂದು ಅದಮ್ಯ ಶಕ್ತಿ ಇರುತ್ತದೆ. ಅದರ ಅನಾವರಣಕ್ಕೆ ಆತ್ಮವಿಶ್ವಾಸ ಬಹಳ ಮುಖ್ಯ. ಧ್ಯಾನ ಮಾಡುವುದರಿಂದ ಮತ್ತು ಸಂಗೀತ ಕೇಳುವುದರಿಂದ ಏಕಾಗ್ರತೆ ಸಾಧಿಸಬಹುದು. ವಿದ್ಯಾರ್ಥಿಗಳ ಮನಸ್ಸು ಎಂದೂ ಖಾಲಿ ಇರಬಾರದು. ಅದು ಸದಾ ಕ್ರಿಯಾಶೀಲವಾಗಿರಬೇಕು ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಮಹಾನ್ ವ್ಯಕ್ತಿಗಳೆಲ್ಲಿ ಬಹುತೇಕರು ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳು ಕೀಳರಿಮೆಯನ್ನು ಬಿಟ್ಟು ಅಧ್ಯಯನದಲ್ಲಿ ತೊಡಗಬೇಕು ಎಂದರು.
ಪ್ರೌಢಶಾಲೆಯ ಕಾರ್ಯಾಧ್ಯಕ್ಷ ಎಂ.ವಿ. ಹೊಸೂರ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿಯ ಪದಾಧಿಕಾರಿಳಿದ್ದರು.
ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಾಧ್ಯಾಪಕ ಎಂ.ವಿ. ಅಂಗಡಿ ಸ್ವಾಗತಿಸಿದರು. ನಾಗರಾಜ ಅಮರಗೋಳ ನಿರೂಪಿಸಿದರು. ಜಿ.ಎ್. ಶಿವಬಸನಗೌಡರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net