

ಗೋಕರ್ಣ: ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರದಲ್ಲಿ ಶ್ರಾವಣದ ಮೊದಲ ಸೋಮವಾರ ಕ್ಷೇತ್ರ ಪದ್ಧತಿಯಿಂತೆ ಪ್ರಾತಃ ಕಾಲದಲ್ಲಿ ಆತ್ಮಲಿಂಗಕ್ಕೆ ವಿಶೇಷ ಕಟ್ಟಳೆ ಪೂಜೆ ಜರುಗಿತು. ಪ್ರಾತಃ ಕಾಲದಲ್ಲಿ ನೆರವೇರುವ ಈ ಪೂಜೆ ವೀಕ್ಷಿಸಲೆಂದೇ ಸ್ಥಳೀಯರು ಸೇರಿ ವಿವಿಧೆಡೆಯಿಂದ ಭಕ್ತರು ಬರುತ್ತಿದ್ದರು. ಆತ್ಮಲಿಂಗಕ್ಕೆ ನಡೆಯುವ ಮಹಾ ಮಂಗಳಾರತಿಯನ್ನು ಕಣ್ತುಂಬಿಕೊಳ್ಳಲು ಭಕ್ತ ಸಮುದಾಯ ಎರಡು ಗಂಟೆಗೂ ಅಧಿಕ ಸಮಯ ಕಾದಿರುತ್ತಿತ್ತು. ಆದರೆ, ಕರೊನಾ ವ್ಯಾಧಿಯಿಂದಾಗಿ ಮಂದಿರಕ್ಕೆ ಭಕ್ತರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೀಗಾಗಿ ಇದೇ ಮೊದಲ ಸಲ ಖಾಲಿ ಮಂದಿರದಲ್ಲಿ ಕೈಗೊಳ್ಳಲಾದ ಕಾರ್ಯಕ್ರಮದಲ್ಲಿ ಮಂತ್ರ ಪಠಣಕ್ಕೆ ಅಗತ್ಯವಿರುವ ಕೆಲವೇ ವೈದಿಕರು ಪಾಲ್ಗೊಂಡಿದ್ದರು. ವೇ. ಗಣಪತಿ ಉಪಾಧ್ಯ ವಿಶೇಷ ಕಟ್ಟಳೆ ನಡೆಸಿಕೊಟ್ಟರು. ಆಡಳಿತಾಧಿಕಾರಿ ಜಿ.ಕೆ. ಹೆಗಡೆ ಪ್ರಾರ್ಥಿಸಿದರು.