ಆತ್ಮಲಿಂಗಕ್ಕೆ ನಮಿಸಿ ಕೃತಾರ್ಥರಾದ ಶಿವಭಕ್ತರು

21gkn1-a4-
Published on

ಗೋಕರ್ಣ: ಮಹಾಶಿವರಾತ್ರಿ ಶಿವಯೋಗದ ಪರ್ವ ದಿನ ಶುಕ್ರವಾರ ದೇಶದ ನಾನಾ ಕಡೆಗಳಿಂದ ಆಗಮಿಸಿದ ಭಕ್ತರು ಮಹಾಬಲೇಶ್ವರ ಆತ್ಮಲಿಂಗವನ್ನು ಮುಟ್ಟಿ ಪೂಜೆ ಮಾಡಿ ಕೃತಾರ್ಥರಾದರು. ಗುರುವಾರ ರಾತ್ರಿಯಿಂದಲೇ ಸಮುದ್ರ ತೀರದಿಂದ ಮಂದಿರ ತನಕ ಭಕ್ತರ ಸಾಲು ಕಂಡು ಬಂದಿತು.ಮಹಾಗಣಪತಿ ಮಂದಿರದಲ್ಲಿ ಕೂಡ ಸಾಲಿನಲ್ಲಿ ಬಂದು ಸಾವಿರಾರು ಭಕ್ತ ಪೂಜೆ ಸಲ್ಲಿಸಿ ನಂತರ ಮಹಾಬಲೇಶ್ವರ ಮಂದಿರಕ್ಕೆ ತೆರಳಿದರು. ಹಿಂದಿನ ದಿನ ರಾತ್ರಿಯಿಂದಲೇ ಪುರಾಣ ಖ್ಯಾತ ಕೋಟಿ ತೀರ್ಥ ಪುಷ್ಕರಣಿಯಲ್ಲಿ ಮತ್ತು ಸಮುದ್ರದಲ್ಲಿ ಯಾತ್ರಿಕರು ಸ್ನಾನ ಮಾಡಲು ಇಳಿದರು.

ಉಪಾಹಾರ ವ್ಯವಸ್ಥೆ: ಮಹಾಬಲೇಶ್ವರ ಮಂದಿರ ಅಮೃತಾನ್ನ ಭೋಜನಾಲಯದಲ್ಲಿ ಶಿವಯೋಗ ಉಪವಾಸ ನಿಮಿತ್ತ ವಿಶೇಷ ಉಪಾಹಾರದ ಏರ್ಪಾಟು ಕೈಗೊಳ್ಳಲಾಯಿತು. ಇಲ್ಲಿನ ಕರವೇ ಪ್ರವೀಣ ಶೆಟ್ಟಿ ಬಣ,ಲಾಯನ್ಸ್ ಕ್ಲಬ್,ರೋಟರಿ ಮುಂತಾದ ಸಂಸ್ಥೆಗಳು ಯಾತ್ರಿಕ ಭಕ್ತರಿಗೆ ಕುಡಿಯಲು ಮಜ್ಜಿಗೆ ನೀಡಿ ಸತ್ಕರಿಸಿದವು.

ಪೂಜೆ ಮಾಡಿದ ವಿಐಪಿಗಳು: ಶಿವಯೋಗದ ನಿಮಿತ್ತ ರಾಜ್ಯ ಸಭಾ ಸದಸ್ಯ ಪ್ರಭಾಕರ ಕೋರೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠ ಶಿವಪ್ರಕಾಶ ದೇವರಾಜು ಆತ್ಮಲಿಂಗ ಪೂಜೆ ನೆರವೇರಿಸಿದರು.

30 ಸಾವಿರ ಭಕ್ತರು: ಶಿವಯೋಗದಂದು ಅಂದಾಜು 30ಸಾವಿರ ಭಕ್ತರು ಆಗಮಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಜಾತ್ರಾ ನಿಮಿತ್ತ ಹೆಚ್ಚಿನ ಪೊಲೀಸರನ್ನು ಆಯೋಜಿಸಲಾಗಿದ್ದು ಭಟ್ಕಳ ಡಿಎಸ್​ಪಿ ಗೌತಮಕುಮಾರ, ಸಿಪಿಐ ಪರಮೇಶ್ವರ ಗುನಗ,ಪಿಎಸ್​ಐ ನವೀನ ನಾಯ್ಕ,ಪಿಎಸ್​ಐ ವೀಣಾ ಹೊನ್ನಿ ಮತ್ತು ಸಿಬ್ಬಂದಿ ವಿವಿಧ ಬಂದೋಬಸ್ತ್ ನೋಡಿಕೊಂಡರು. ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದ್ದು ಯಾತ್ರಿಕರ ವಾಹನಗಳಿಗೆ ಪ್ರವೇಶ ದ್ವಾರದ ಭದ್ರಕಾಳಿ ಕಾಲೇಜ್ ಬಳಿ ನಿರ್ವಿುಸಿರುವ ರ್ಪಾಂಗ್​ನಲ್ಲಿ ವ್ಯವಸ್ಥೆ ಮಾಡಲಾಯಿತು. ಸ್ಥಳೀಯ ಪಂಚಾಯತಿ ದಾರಿ ದೀಪ, ಕುಡಿವ ನೀರು ಮತ್ತು ಸ್ವಚ್ಛತೆಯನ್ನು ಉತ್ತಮವಾಗಿ ನಿರ್ವಹಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net