

ಮಂಜುನಾಥ ಕೋಳಿಗುಡ್ಡ ಬೆಳಗಾವಿ: ಕೇಂದ್ರ ಸರ್ಕಾರದ ಪಿಎಂ ಸ್ವನಿಧಿ ಯೋಜನೆ ಕಿರು ಸಾಲ ಸೌಲಭ್ಯ ಪರಿಣಾಮದಿಂದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಒಂದೇ ವರ್ಷದಲ್ಲಿ ಬರೋಬ್ಬರಿ 10.53 ಕೋಟಿ ರೂ. ಸಹಾಯಧನ ವಿತರಣೆ ಮಾಡಲಾಗಿದೆ.
ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಬೀದಿ ಬದಿ ವ್ಯಾಪಾರಿಗಳಿಗಾಗಿ 2020ರಲ್ಲಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಆತ್ಮನಿರ್ಭರ್ ನಿಧಿ (ಪಿಎಂ ಸ್ವನಿಧಿ) ಎಂಬ ಯೋಜನೆ ಜಾರಿಗೊಳಿಸಿ ಬೀದಿ ಬದಿ ವ್ಯಾಪಾರಿಗಳಿಗೆ ತಲಾ 10 ಸಾವಿರ ರೂ.ವರೆಗೆ ಕಿರು ಸಾಲ ಸೌಲಭ್ಯ ಕಲ್ಪಿಸಿತ್ತು. ಪರಿಣಾಮ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಎರಡು ವರ್ಷದ ಅವಧಿಯಲ್ಲಿ ಬೀದಿ ಬದಿ ವ್ಯಾಪಾರಿಗಳ ಸಂಖ್ಯೆ 14 ಸಾವಿರ ದಿಂದ 27 ಸಾವಿರಕ್ಕೆ ಏರಿಕೆ ಕಂಡಿದೆ. ಅಲ್ಲದೆ, ಬೀದಿ ಬದಿ ವ್ಯಾಪಾರಕ್ಕಾಗಿ ಲಕ್ಷಾಂತರ ರೂ. ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗಿವೆ.
2018-19ನೇ ಸಾಲಿನಲ್ಲಿ ಸ್ಥಳೀಯ ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲಿ 14,358 ಜನರು ಬೀದಿ ಬದಿ ಕುಳಿತುಕೊಂಡು ವ್ಯಾಪಾರ ನಡೆಸುತ್ತಿದ್ದರು. ಇದೀಗ ಪಿಎಂ ಸ್ವನಿಧಿ ಯೋಜನೆ ಅನುಷ್ಠಾನದ ಬಳಿಕ ಜಿಲ್ಲೆಯಲ್ಲಿ ನಗರ, ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿ ಬೀದಿ ಬದಿಯಲ್ಲಿ ಕುಳಿತುಕೊಂಡು 27,856 ಜನರು ಹಣ್ಣುಗಳು, ತರಕಾರಿ, ಚಹಾ, ಬಟ್ಟೆ, ಪುಸ್ತಕ, ಲೇಖನ ಸಾಮಗ್ರಿ ಸೇರಿ ಇತರ ವಸ್ತುಗಳು ಮಾರಾಟ ಮಾಡುತ್ತ ಬದುಕು ಸಾಗಿಸುತ್ತಿದ್ದಾರೆ. ಅದರಲ್ಲಿ ಪಿಎಂ ಸ್ವನಿಧಿ ಯೋಜನೆ ಅಡಿಯಲ್ಲಿ 10,531 ಬೀದಿ ಬದಿ ವ್ಯಾಪಾರಿಗಳು 10.53 ಕೋಟಿ ರೂ. ಕಿರು ಸಾಲ ಸೌಲಭ್ಯ ಪಡೆದುಕೊಂಡಿದ್ದಾರೆ. ಅಲ್ಲದೆ, ಸ್ಥಳೀಯ ಸಂಸ್ಥೆಗಳಿಂದ ಬೀದಿ ಬದಿ ವ್ಯಾಪಾರಿಗಳೆಂದು ಅಧಿಕೃತವಾಗಿ ಪರವಾನಗಿ ಪತ್ರ ಪಡೆದುಕೊಂಡಿದ್ದಾರೆ.
ಬೀದಿ ಬದಿ ವ್ಯಾಪಾರಿಗಳು ಸಾಮಾನ್ಯವಾಗಿ ಸಣ್ಣ ಬಂಡವಾಳ ಮೂಲದೊಂದಿಗೆ ಕೆಲಸ ಮಾಡುವವರಿದ್ದು, ಅಂಥವರಿಗೆ ವ್ಯವಹಾರ ಪುನರಾರಂಭಿಸಲು ಬಂಡವಾಳವನ್ನು ಬ್ಯಾಂಕ್‌ಗಳ ಮೂಲಕ ಒದಗಿಸಲಾಗುತ್ತಿದೆ. ಅಲ್ಲದೆ, ಸರ್ಕಾರ ಯೋಜನೆಗಳ ವ್ಯಾಪ್ತಿಗೆ ಒಳಪಡಿಸುವ ಉದ್ದೇಶದಿಂದ 2022-23ನೇ ಸಾಲಿನ ಅವಧಿಯಲ್ಲಿ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ಕಾರ್ಯ ಆರಂಭಿಸಲಾಗಿದೆ ಎಂದು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ತಿಳಿಸಿದ್ದಾರೆ.
ನಿತ್ಯ ಲಕ್ಷಾಂತರ ರೂ. ವಹಿವಾಟು: ಜಿಲ್ಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಸೇರಿದಂತೆ 33 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳ ಸಂಖ್ಯೆಹೆಚ್ಚಾಗಿದ್ದು, ನಿತ್ಯ ಲಕ್ಷಾಂತರ ರೂ. ವಹಿವಾಟು ನಡೆಯುತ್ತಿದೆ. ಗ್ರಾಮೀಣ, ನಗರ ಪ್ರದೇಶದಲ್ಲಿ ಬಡ ಕುಟುಂಬಗಳು ಸಗಟು ಮಾರುಕಟ್ಟೆಗಳಲ್ಲಿ ತರಕಾರಿ, ಹೂ, ಹಣ್ಣು ಹಾಗೂ ಇತರೆ ವಸ್ತುಗಳನ್ನು ಖರೀದಿಸಿ ಬೀದಿ ಬದಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಿದ್ದಾರೆ. ಪ್ರತಿಯೊಬ್ಬ ವ್ಯಾಪಾರಿ ಕನಿಷ್ಠ 2,500 ರಿಂದ 3000 ರೂ. ವ್ಯಾಪಾರ ಮಾಡುತ್ತಿದ್ದಾರೆ ಎಂದು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ತಿಳಿಸಿದ್ದಾರೆ.