

ಯಲಬುರ್ಗಾ: ವಿದ್ಯಾರ್ಥಿಗಳು ತಮ್ಮಲ್ಲಿರುವ ತಪ್ಪು ತಿಳಿವಳಿಕೆ ಹಾಗೂ ಭಯ, ಆತಂಕವನ್ನು ಬಿಟ್ಟು ಆತ್ಮವಿಶ್ವಾಸದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಬೇಕು ಎಂದು ಗ್ರಾಪಂ ಅಧ್ಯಕ್ಷ ಶರಣಕುಮಾರ್ ಅಮರಗಟ್ಟಿ ಹೇಳಿದರು.
ಇದನ್ನೂ ಓದಿ: 21ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ
ತಾಲೂಕಿನ ಚಿಕ್ಕಮ್ಯಾಗೇರಿ ಎಸ್.ಎನ್.ಎಸ್.ಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಾಗೂ ಶಾಲಾ ಆಡಳಿತ ಮಂಡಳಿಯಿಂದ ಹಮ್ಮಿಕೊಂಡಿದ್ದ ವಿಶೇಷ ತರಗತಿ ಸಮಾರೋಪ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ವಿತರಣಾ ಸಮಾರಂಭದಲ್ಲಿ ಶನಿವಾರ ಮಾತನಾಡಿದರು.
ಶಿಕ್ಷಣ ಎಂಬುದು ಬುದ್ಧಿಶಕ್ತಿಯನ್ನು ಸುಧಾರಿಸುತ್ತದೆ. ಜಗತ್ತನ್ನು ಗೆಲ್ಲಲು ಅಗತ್ಯವಾದ ಕೌಶಲ್ಯ ಜ್ಞಾನದೊಂದಿಗೆ ನಮ್ಮನ್ನು ಸಜ್ಜುಗೊಳಿಸುತ್ತದೆ. ಯಶಸ್ಸನ್ನು ಸಾಧಿಸಲು ಮತ್ತು ಪರಾನುಭೂತಿಯ ಮಸೂರದ ಮೂಲಕ ಜಗತ್ತನ್ನು ಗ್ರಹಿಸುವ ಸಾಮರ್ಥ್ಯವನ್ನು ಮಾಡಿಕೊಡುತ್ತದೆ.
ಮಾ.21ರಿಂದ ನಡೆಯಲಿರವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷಾ ಕೇಂದ್ರಕ್ಕೆ ಭಯ ತೊರೆದು ಆಗಮಿಸಬೇಕು. ಯಾವುದೇ ರೀತಿ ಗೊಂದಲ ಮಾಡಿಕೊಳ್ಳಬಾರದು. ಹಾಗೇ ಪರೀಕ್ಷಾ ಕೇಂದ್ರದ ಬಳಿ ಅಕ್ರಮ ಚಟುವಟಿಕೆಗಳಿಗೆ ದಾರಿ ಮಾಡಿ ಕೊಡಬಾರದು ಎಂದರು.
ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಸತೀಶ್ ಮಾತನಾಡಿ, ಪ್ರಸ್ತಕ ಸಾಲಿನಲ್ಲಿ 2.80.ಕೋಟಿ ರೂ.ವೆಚ್ಚದಲ್ಲಿ ರಾಜ್ಯದ 20 ಸಾವಿರ ಶಾಲೆಯಲ್ಲಿ ವಿಶೇಷ ತರಗತಿ ನಡೆಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಸರಳವಾಗಿ ಎದುರಿಸಲು ಅನುಕೂಲವಾಗಲಿ ಎಂಬ ಉದ್ದೇಶ ಹೊಂದಲಾಗಿದೆ. ಈ ಕಾರಣದಿಂದ ಸಂಸ್ಥೆಯ ಶಿಕ್ಷಣ ಚಟುವಟಿಕೆಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದರು.