ಆತ್ಮ ರಕ್ಷಣೆ ಕಲೆ ಕರಗತ ಮಾಡಿಕೊಳ್ಳಿ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸಲಹೆ, ಓಬವ್ವ ಸ್ವಯಂ ಆತ್ಮ ರಕ್ಷಣೆ ಕೌಶಲ ತರಬೇತಿ ಉದ್ಘಾಟನೆ

Obavva Karate Tarabethi 08.02 (4)
Published on

ಬೆಂಗಳೂರು ಗ್ರಾಮಾಂತರ: ವಿದ್ಯಾರ್ಥಿನಿಯರು, ಅಪ್ರಾಪ್ತೆಯರು ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ವಿವಿಧ ಬಗೆಯ ದೌರ್ಜನ್ಯಗಳ ತಡೆಗೆ ಆತ್ಮ ರಕ್ಷಣೆ ಕಲೆ ಸಹಕಾರಿ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹೇಳಿದರು.

ದೇವನಹಳ್ಳಿ ತಾಲೂಕು ಬೊಮ್ಮವಾರದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಆವರಣದಲ್ಲಿ ಮಂಗಳವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಬೆಂಗಳೂರಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಓಬವ್ವ ಸ್ವಯಂ ಆತ್ಮ ರಕ್ಷಣೆ ಕಲೆ, ಕೌಶಲ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಿಡಿಗೇಡಿಗಳಿಂದಾಗಿ ಹೆಣ್ಣು ಮಕ್ಕಳು ಶೋಷಣೆಗೆ ಒಳಗಾಗುತ್ತಿದ್ದಾರೆ. ಸಮಾಜದಲ್ಲಿ ಹೆಣ್ಣುಮಕ್ಕಳು ಆತಂಕವಿಲ್ಲದೆ ಜೀವನ ನಡೆಸಲು ಕೆಲವು ಕಿಡಿಗೇಡಿಗಳು ತಡೆಗೋಡೆಯಂತಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಸರ್ಕಾರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ, ವಸತಿ ಶಾಲೆಗಳಲ್ಲಿನ ವಿದ್ಯಾರ್ಥಿನಿಯರಿಗೆ ವಿನೂತನವಾಗಿ ಜಾರಿಗೊಳಿಸಿರುವ ಓಬವ್ವ ಸ್ವಯಂ ಆತ್ಮ ರಕ್ಷಣೆ ಕಲೆ, ಕೌಶಲಗಳ ತರಬೇತಿ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.

ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಯಮ, ಧೈರ್ಯ ಬೆಳೆಸಿಕೊಳ್ಳಲು ಇಂತಹ ಕೌಶಲ ತರಬೇತಿ ನೆರವಾಗಲಿದ್ದು, ಯೋಗ, ವ್ಯಾಯಾಮ,ಕರಾಟೆಯನ್ನು ಪ್ರತಿದಿನದ ಜೀವನದಲ್ಲಿ ರೂಢಿಸಿಕೊಂಡು ಅಭ್ಯಾಸ ಮಾಡುವುದರಿಂದ ಆತ್ಮಸ್ಥೈರ್ಯದೊಂದಿಗೆ ಸವಾಲು ಎದುರಿಸಿ ಉತ್ತಮ ಬೆಳವಣಿಗೆ ಹೊಂದಲು ಸಾಧ್ಯವಾಗಲಿದೆ ಎಂದರು.

ಆತ್ಮಸ್ಥೈರ್ಯ ಅವಶ್ಯಕ: ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ವಿದ್ಯಾರ್ಥಿನಿಯರು ಇಂಥ ತರಬೇತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಈ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು. ಸಮಸ್ಯೆಗಳು ಎದುರಾದಾಗ ಶಾಂತಚಿತ್ತ ಮನೋಭಾವ ಹಾಗೂ ಆತ್ಮಸ್ಥೈರ್ಯದಿಂದ ಬಗೆಹರಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಎಲ್ಲ ರಂಗದಲ್ಲೂ ಪ್ರಬಲ: ಇಂದು ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ಪುರುಷರಿಗೆ ಸರಿಸಮನಾಗಿ ದುಡಿಯುತ್ತಿದ್ದಾರೆ. ಅನೇಕ ಕ್ಷೇತ್ರಗಳಲ್ಲಿ ಸಾಧನೆಗಳಿಗೆ ಮೈಲುಗಲ್ಲಾಗಿದ್ದಾರೆ. ಆದರೂ ಇಂದಿಗೂ ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ನಡೆಯುತ್ತಲೇ ಇದೆ, ಇಂಥ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳು ಅಸಹಾಯಕರಾಗದೆ ಆತ್ಮಸ್ಥೈರ್ಯದಿಂದ ಪರಿಸ್ಥಿತಿ ಎದುರಿಸಬೇಕು. ಇದಕ್ಕೆ ಇಂಥ ಕಲೆ ಅಗತ್ಯವಶ್ಯ ಎಂದು ಅಪರ ಜಿಲ್ಲಾಧಿಕಾರಿ ವಿಜಯಾ ಇ. ರವಿಕುಮಾರ್ ಹೇಳಿದರು.

ಕಿರುಕುಳ ತಡೆಯಲು ರಕ್ಷಣಾ ತರಬೇತಿ: ಮಹಿಳೆಯರ ಮೇಲೆ ದೌರ್ಜನ್ಯ, ಕಿರುಕುಳದಂಥ ಪ್ರಕರಣ ನಡೆಯುತ್ತಲೇ ಇವೆ. ಇವುಗಳನ್ನು ತಡೆಯಲು ಮತ್ತು ಮಹಿಳೆಯರು ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಲು ಹಾಗೂ ಆರೋಗ್ಯದ ಹಿತದೃಷ್ಟಿಯಿಂದಲೂ ಓಬವ್ವ ಕೌಶಲ ರಕ್ಷಣಾ ತರಬೇತಿ ಉಪಯುಕ್ತವಾಗಲಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೋನ ವಂಶಿಕೃಷ್ಣ ತಿಳಿಸಿದರು.

ಕಲೆ ಪ್ರದರ್ಶನ: ವೇದಿಕೆ ಕಾರ್ಯಕ್ರಮಕ್ಕೂ ಮೊದಲು ವಿದ್ಯಾರ್ಥಿನಿಯರು ಸ್ವಯಂ ಆತ್ಮ ರಕ್ಷಣೆ ಕಲೆ ಪ್ರದರ್ಶಿಸಿ ಗಮನ ಸೆಳೆದರು. ಅಧಿಕಾರಿ ವರ್ಗ ವಿದ್ಯಾರ್ಥಿನಿಯರ ಪ್ರದರ್ಶನಕ್ಕೆ ತಲೆತೂಗಿ ಚಪ್ಪಾಳೆ ತಟ್ಟುವ ಮೂಲಕ ಹುರಿತುಂಬಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net