ಆತ್ಮ ತೃಪ್ತಿಗಾಗಿ ಸಾಹಿತ್ಯ ರಚಿಸಿ

KASAPA
Published on

ಬೀದರ್: ಸಾಹಿತ್ಯ ಹಣ ಗಳಿಸುವ ಕ್ಷೇತ್ರವಲ್ಲ. ಇದು ಉದ್ಯಮ ಹಾಗೂ ವ್ಯಾಪಾರವಲ್ಲದ ಕಾರಣ ಇಲ್ಲಿ ಗಳಿಕೆಯ ಪ್ರಶ್ನೆಯೇ ಬರಲ್ಲ. ಆತ್ಮ ತೃಪ್ತಿ ಹಾಗೂ ಸಾಮಾಜಿಕ ಶುದ್ಧೀಕರಣಕ್ಕಾಗಿ ಸಾಹಿತ್ಯ ರಚಿಸಬೇಕು ಎಂದು ಸಾಹಿತಿ ಡಾ.ಜಗದೇವಿ ತಿಬಶೆಟ್ಟೆ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಮತ್ತು ತಾಲೂಕು ಘಟಕದಿಂದ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಮಾತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ತಂದೆ ಬಸವಣಪ್ಪ ಅವರ ಪ್ರಭಾವದಿಂದ ಬಾಲ್ಯದಿಂದಲೇ ನಾನು ಶರಣ ಸಾಹಿತ್ಯ ಓದಲು ಪ್ರಾರಂಭಿಸಿದೆ. ಬಸವರಾಜ ಅಂಬಲಗಿ, ರಾಮಶಾಸ್ತ್ರಿ, ಸಿದ್ರಾಮಪ್ಪ ಮಾಸಿಮಾಡೆ ಇತರರ ಪ್ರೇರಣೆಯಿಂದ ಸಾಹಿತ್ಯ ಹಾಗೂ ಕನ್ನಡದತ್ತ ಒಲವು ಬೆಳೆದು ಹೊಂಗಿರಣ, ಡಾ. ಸೋಮನಾಥ ಯಾಳವಾರ ಬದುಕು ಬರಹ ಪುಸ್ತಕ ಹೊರತರಲು ಸಾಧ್ಯವಾಯಿತು ಎಂದರು.

ಸಾಹಿತ್ಯದಲ್ಲಿ ಮುಂದುವರೆಯಲು ಸಾಹಿತ್ಯಿಕ ವಾತಾವರಣ ಮತ್ತು ಸೂಕ್ತ ಮಾರ್ಗದರ್ಶನ ಅಗತ್ಯ. ಜಿಲ್ಲೆಯಲ್ಲಿ ಮಹಿಳಾ ಸಾಹಿತಿಗಳ ಸಂಖ್ಯೆ ಹೆಚ್ಚಾಗಿದೆ. ಮಹಿಳೆಯರು ಕಾವ್ಯಕ್ಕೆ ಮಾತ್ರ ಸೀಮಿತರಾಗದೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಬೇಕು ಎಂದು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿದರು. ಬಿಪಿಟಿ ವಿದ್ಯಾಲಯ ಪ್ರಾಚಾರ್ಯ ಡಾ.ಹಣಮಂತರಾವ ಭರಶೆಟ್ಟಿ ಉದ್ಘಾಟಿಸಿದರು. ಕಸಾಪ ತಾಲೂಕಾಧ್ಯಕ್ಷ ಎಂ.ಎಸ್.ಮನೋಹರ ಅಧ್ಯಕ್ಷತೆ ವಹಿಸಿದ್ದರು. ಶೈಲಜಾ ಹುಡಗೆ, ಸುವರ್ಣಾ ನಮೋಶಿ, ರಮೇಶ ಬಿರಾದಾರ, ವಿದ್ಯಾವತಿ ಬಲ್ಲೂರ್, ಓಂಕಾರ ಪಾಟೀಲ್, ಸಂಗಮೇಶ ಜಾಂತೆ, ಗುಂಡಪ್ಪ ಹುಡಗೆ ಇದ್ದರು. ಟಿ.ಎಂ.ಮಚ್ಚೆ ಸ್ವಾಗತಿಸಿದರು. ಕಸ್ತೂರಿ ಪಟಪಳ್ಳಿ ನಿರೂಪಣೆ ಮಾಡಿದರು. ಜಗನ್ನಾಥ ಕಮಲಾಪುರೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net