

ಚಿಂತಾಮಣಿ : ದೇಹದಲ್ಲಿ ಪರಮಾತ್ಮನ ಸ್ವರೂಪವಾದ ಆತ್ಮವಿದೆ. ಈ ಆತ್ಮವನ್ನು ಸಂಸ್ಕರಿಸುವ ಚಿಂತನೆ ಸದಾಕಾಲ ನಡೆಯಬೇಕು ಎಂದು ಹುಬ್ಬಳ್ಳಿ ಮೂರು ಸಾವಿರ ಮಠದ ಪೀಠಾಧಿಪತಿ ಶ್ರೀ ಗುರುಸಿದ್ದರಾಜ ಯೋಗೀಂದ್ರ ಸ್ವಾಮೀಜಿ ತಿಳಿಸಿದರು.
ಕೈವಾರದ ಶ್ರೀ ಯೋಗಿನಾರೇಯಣ ಮಠದಲ್ಲಿ ಆಯೋಜಿಸಿದ್ದ ‘ಇಂದಿನ ಸಮಾಜಕ್ಕೆ ಆತ್ಮಚಿಂತನೆಯ ಅವಶ್ಯಕತೆ ’ ಚಿಂತನಾ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ, ಆತ್ಮದ ಜಾಗೃತಿಯಿಂದ ದೇಹವು ಬಲವಾಗುತ್ತದೆ. ಆತ್ಮದ ಜಾಗೃತಿ ಇಲ್ಲವಾದರೆ ಇಂದ್ರಿಯಗಳು ಶಕ್ತಿ ಕಳೆದುಕೊಳ್ಳುತ್ತದೆ. ಯಾರ ಇಂದ್ರಿಯಗಳು ಹತೋಟಿಯಲ್ಲಿವೆಯೋ ಅಂತಹವರ ಪ್ರಜ್ಞೆಯು ಸ್ಥಿರವಾಗಿರುತ್ತದೆ ಎಂದರು.
ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ. ಎಂ.ಆರ್.ಜಯರಾಮ್ ಮಾತನಾಡಿ, ವಿದ್ಯೆಗಳಲ್ಲಿ ಶ್ರೇಷ್ಠವಾದುದು ಬ್ರಹ್ಮವಿದ್ಯೆ. ಇದೇ ಆತ್ಮಚಿಂತನೆ. ಅತ್ಯಂತ ಪ್ರಾಚೀನವಾದ ಆತ್ಮ ಚಿಂತನೆ ಸಾಮಾನ್ಯವಾದುದಲ್ಲ. ಹುಟ್ಟು ಸಾವುಗಳಿಂದ ಮುಕ್ತವಾಗುವಿಕೆಯೇ ಮೋಕ್ಷ. ಜ್ಞಾನ ಪಡೆದು ಬುದ್ಧಿಯಿಂದ ಚಿಂತನೆ ಮಾಡುವ ಕಾರಣ ಅನಂತಕೋಟಿ ಜೀವರಾಶಿಗಳಲ್ಲಿ ಮಾನವ ಶ್ರೇಷ್ಠ ಜೀವಿಯಾಗಿದ್ದಾನೆ. ಮಾನವನು ಆತ್ಮಚಿಂತನೆ ನಡೆಸಿ, ಮಾಯೆಯ ಪೊರೆ ಕಳಚಿದಾಗ ಮಾತ್ರ ಮೋಕ್ಷದ ಹಾದಿ ಕಾಣುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮೊದಲು ಯೋಗಿನಾರೇಯಣ ತಾತಯ್ಯನವರ ಮೂಲ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಚಿನ್ಮಯ ಮಿಷನ್ ಅಧ್ಯಕ್ಷ ಶ್ರೀಬ್ರಹ್ಮಾನಂದಜೀ ಅವರ ಪ್ರವಚನದ ವಿಡಿಯೋ ಪ್ರದರ್ಶಿಸಲಾಯಿತು. ಅಧ್ಯಾತ್ಮ ಚಿಂತಕ ಡಾ. ಬಾಬು ಕೃಷ್ಣಮೂರ್ತಿ ಉಪನ್ಯಾಸ ನೀಡಿದರು.
ಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕರಾದ ವಾನರಾಶಿ ಬಾಲಕೃಷ್ಣ ಭಾಗವತರ್ ತಂಡದಿಂದ ಸಾಮೂಹಿಕ ನಾಮ ಸಂಕೀರ್ತನೆ ಹಮ್ಮಿಕೊಳ್ಳಲಾಗಿತ್ತು. ಹರಿಕಥಾ ವಿದ್ವಾನ್ ಎನ್.ಆರ್.ಜ್ಞಾನಮೂರ್ತಿ, ಕೈವಾರ ಮಠ ಟ್ರಸ್ಟ್‌ನ ಪದಾಧಿಕಾರಿಗಳು ಭಾಗವಹಿಸಿದ್ದರು.