

ಸೋಮವಾರಪೇಟೆ: ಹನ್ನೆರಡನೇ ಶತಮಾನದಲ್ಲಿ ಎಲ್ಲ ಜಾತಿ ಸಮುದಾಯಗಳ ಶರಣರಿಂದ ರೂಪಿತವಾದ ವಚನ ಸಾಹಿತ್ಯ ಮನುಷ್ಯನ ಆತ್ಮದಉದ್ಧಾರಕ್ಕೆ ದಿವ್ಯ ಔಷಧದಂತೆ ಎಂದು ತಹಶೀಲ್ದಾರ್ ಎಸ್.ಎನ್. ನರಗುಂದ್ ಹೇಳಿದರು.
ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ತೋಳೂರು ಶೆಟ್ಟಳ್ಳಿಯ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಗುರುವಾರ
ಹಮ್ಮಿಕೊಂಡಿದ್ದ ವಚನಗಳ ನಡಿಗೆ-ಶಾಲಾ ಕಾಲೇಜುಗಳೆಡೆಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಜಾತಿ ಪದ್ಧತಿ, ಅಜ್ಞಾನದ ಅಂಧ ಶ್ರದ್ಧೆಗಳೇ ತುಂಬಿದ ಅಂದಿನ ದಿನಗಳಲ್ಲಿ ಅಮೃತಮಯವಾದ ಶರಣರ ನುಡಿಗಳು ವಿಚಾರಜ್ಯೋತಿಯನ್ನು ಹೊತ್ತಿಸಿ ಸಾಮಾಜಿಕ ಪರಿವರ್ತನೆಯ ಬೆಳಕು ನೀಡಿದರು. ಹಾಗಾಗಿ ಇಂದಿನ ವಿದ್ಯಾರ್ಥಿಗಳು ವಚನ ಸಾಹಿತ್ಯವನ್ನು ಅರಿಯುವ ಹಾಗೂಅವುಗಳ ಸಾರದಂತೆ ನಡೆದುಕೊಳ್ಳುವುದು ಇಂದು ಅನಿವಾರ್ಯವಿದೆ. ಹಾಗಾಗಿ, ಶಾಲಾ-ಕಾಲೇಜುಗಳೆಡೆಗೆ ವಚನಗಳ ನಡಿಗೆ ಉತ್ತಮ ಕಾರ್ಯಕ್ರಮಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬಸವನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಶಿಕ್ಷಕ ಕೆ.ಆರ್. ರಮೇಶ್ ಮಾತನಾಡಿ, ವಿಶ್ವ ಸಾಹಿತ್ಯಕ್ಕೆ ಕನ್ನಡಸಾಹಿತ್ಯ ಕೊಟ್ಟ ಬಹು ದೊಡ್ಡ ಕಾಣಿಕೆ ಎಂದರೆ ಅದು ವಚನ ಸಾಹಿತ್ಯ. ಮಹಿಳೆಯರಿಗೆ ಮೊಟ್ಟ ಮೊದಲ ಬಾರಿಗೆ ಸ್ವಾತಂತ್ರೃ ನೀಡಿದ ಹಾಗೆಯೇಮೂಢನಂಬಿಕೆ ಹಾಗೂ ಶೋಷಣೆಗಳಲ್ಲಿ ಮುಳುಗಿದ್ದ ಅಂದಿನ ಜನರಿಗೆ ಜೀವನದ ಬೆಳಕು ತೋರಿದ್ದು 12ನೇ ಶತಮಾನದ ಬಸವಾದಿ ಶರಣರು ಎಂದುವಚನ ಸಾಹಿತ್ಯದ ಕುರಿತು ಮಾತನಾಡಿದರು.
ಯುವ ಬರಹಗಾರ ವೈ.ಎಸ್.ನಿಶ್ಚಯ್ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿನ ಕಾಯಕ ಹಾಗೂ ದಾಸೋಹ ಪರಂಪರೆ ಮತ್ತು ಸಾಮಾಜಿಕಬದಲಾವಣೆಗೆ ವಚನ ಸಾಹಿತ್ಯ ಕೊಟ್ಟ ಬಳುವಳಿ ಕುರಿತು ಉಪನ್ಯಾಸ ನೀಡಿದರು.
ವಚನ ಸಾಹಿತ್ಯ ವೇದಿಕೆ ಅಧ್ಯಕ್ಷ ಕೆ.ಎಸ್.ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಡಾ.ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲ ಚಂದ್ರಶೇಖರ ರೆಡ್ಡಿ,ಶಿಕ್ಷಕರಾದ ಶಭರಿಗಿರೀಶ್, ಶಬಾನಾ ಹಾಗೂ ಎಂ.ಡಿ. ಭವ್ಯಾ ಇದ್ದರು.
ಶಾಲಾ ವಿದ್ಯಾರ್ಥಿಗಳಿಂದ ವಚನ ಗಾಯನ ಹಾಗೂ ನೃತ್ಯ ಕಾರ್ಯಕ್ರಮಗಳು ನಡೆದವು. ವಿದ್ಯಾರ್ಥಿನಿಯರಾದ ಪ್ರಾರ್ಥನಾ, ತನುಷಾ, ಲಾಸ್ಯ,ಮೌಲ್ಯ ಹಾಗೂ ಲಾಂಛನಾ ತಂಡಗಳಿಂದ ವಚನ ಗಾಯನ ನಡೆಯಿತು.