ಆತಂಕ ಸೃಷ್ಟಿಸಿದ್ದ ವಿದೇಶಿ ಪ್ರಜೆ

4bkl2 (1)
Published on

ಭಟ್ಕಳ: ಮುಂಬೈನಿಂದ ಬಂದಿದ್ದ ಮಂಗಳಾ ಎಕ್ಸ್​ಪ್ರೆಸ್ ರೈಲಿನಲ್ಲಿ ರಷ್ಯಾ ಮತ್ತು ಕಝುಕಿಸ್ತಾನದವರು ಎನ್ನಲಾದ ಇಬ್ಬರು ವಿದೇಶಿ ಪ್ರಜೆಗಳು ಬಂದಿಳಿದು ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ಶುಕ್ರವಾರ ರಾತ್ರಿ 11.40ಕ್ಕೆ ಭಟ್ಕಳ ರೈಲು ನಿಲ್ದಾಣದಲ್ಲಿ ಜರುಗಿದೆ.

ರಷ್ಯಾದ ವಾಲೇರಿ ಹಾಗೂ ಕಝುಕಿಸ್ತಾನದ ವಿಕ್ಟೋರ್ ಎಂಬುವವರು ರೈಲಿನಿಂದ ಕೆಳಗಿಳಿದು ಓಡಿ ಹೋಗಿ ಕತ್ತಲೆ ಇರುವ ಸ್ಥಳದಲ್ಲಿ ಅಡಗಿಕೊಂಡಿದ್ದಾರೆ. ರೈಲಿನಿಂದ ಇಳಿದು ಅಡಗಿಕೊಂಡಿದ್ದ ವಿದೇಶಿಯರನ್ನು ನೋಡಿದ ಕಂದಾಯ ಇಲಾಖೆಯ ಸಿಬ್ಬಂದಿಯು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರೈಲ್ವೆ ಪೊಲೀಸರು ನಗರ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಆಗಮಿಸಿದ ನಗರ ಠಾಣೆಯ ಸಿಬ್ಬಂದಿ ಸಹಾಯದಿಂದ ವಿದೇಶಿ ಪ್ರಜೆಗಳನ್ನು ವಶಕ್ಕೆ ಪಡೆದಿದ್ದಾರೆ. ‘ಎಲ್ಲಿಂದ ಬಂದಿದ್ದಿರಿ, ಭಟ್ಕಳಕ್ಕೆ ಯಾಕೆ ಬಂದಿದ್ದಿರಿ, ದಾಖಲೆ ತೋರಿಸಿ’ ಎಂದು ವಿಚಾರಿಸಿದ್ದಾರೆ. ನಂತರ ಅವರನ್ನು ಭಟ್ಕಳ ಕಂದಾಯ ಇಲಾಖೆ ಅಧಿಕಾರಿ ಗಣಪತಿ ಮೇತ್ರಿ ಅವರ ವಶಕ್ಕೆ ನೀಡಲಾಗಿದೆ. ‘ಗೋವಾದಿಂದ ಬಂದಿದ್ದು ಗೋಕರ್ಣಕ್ಕೆ ಹೋಗಬೇಕಿತ್ತು. ದಾರಿ ತಪ್ಪಿ ಭಟ್ಕಳಕ್ಕೆ ಬಂದು ಇಳಿದಿದ್ದೇವೆ’ ಎಂದು ವಿದೇಶಿಗರು ಹೇಳಿದ್ದಾರೆ. ನಂತರ ಅವರನ್ನು ಬೆಳಗಿನ ಜಾವ 3 ಗಂಟೆಗೆ ಮಂಗಳೂರಿನಿಂದ ಆಗಮಿಸಿದ ನೇತ್ರಾವತಿ ರೈಲಿನಲ್ಲಿ ಕಂದಾಯ ಇಲಾಖೆಯ ಅನುಮತಿ ಮೇರೆಗೆ ವಾಪಸ್ ಕಳುಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net