ಆತಂಕ ಸೃಷ್ಟಿಸಿದ ವಿದ್ಯುತ್ ತಂತಿ

30 NRD-4A
Published on

ನರಗುಂದ: ತುಕ್ಕು ಹಿಡಿದ ವಿದ್ಯುತ್ ತಂತಿಯೊಂದು ಪಟ್ಟಣದ ಸೋಮಾಪೂರ ಬಡಾವಣೆಯ ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲಿಯೇ ಭಾನುವಾರ ಹರಿದು ಬಿದ್ದ ಪರಿಣಾಮ ಸ್ಥಳೀಯರು ಹಾಗೂ ವಾಹನ ಸವಾರರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.

ಸೋಮಾಪೂರ ಸರ್ವಜ್ಞ ಸರ್ಕಲ್ ಬಳಿಯ ಹುಬ್ಬಳ್ಳಿ-ವಿಜಯಪೂರ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಬಾಗಲಕೋಟೆ ಡಿಪೋಗೆ ಸೇರಿರುವ ಬಸ್ ಹಾಗೂ ಖಾಸಗಿ ಕಾರ್ ತೆರಳುತ್ತಿದ್ದವು. ಈ ವೇಳೆ ತುಕ್ಕು ಹಿಡಿದ ತಂತಿ ಏಕಾಏಕಿ ಹರಿದು ರಸ್ತೆ ಮೇಲೆ ಬಿದ್ದಿದೆ. ಎರಡು ವಾಹನಗಳ ಚಾಲಕರ ಸಮಯ ಪ್ರಜ್ಞೆಯಿಂದ ಪ್ರಯಾಣಿಕರ ಜೀವ ಉಳಿದಿದೆ. ಈ ವೇಳೆ ಸ್ಥಳದಲ್ಲಿದ್ದ ಕನ್ನಡ ರಕ್ಷಣಾ ಸೇನೆ ಉತ್ತರ ಕರ್ನಾಟಕ ಉಪಾಧ್ಯಕ್ಷ ರವಿ ಚಿಂತಾಲ ಅವರು ವಿದ್ಯುತ್ ತಂತಿ ತೆರವು ಗೊಳಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಅಲ್ಲದೆ, ಸೋಮಾಪೂರ ಬಡಾವಣೆಯ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಎಲ್ಲ ವಿದ್ಯುತ್ ಕಂಬಗಳಲ್ಲಿನ ತಂತಿಗಳು ಸಂಪೂರ್ಣ ತುಕ್ಕು ಹಿಡಿದಿವೆ. ಇದರಿಂದ ಪ್ರತಿದಿನ ರಾತ್ರಿ ಪ್ರತಿಯೊಂದು ಕಂಬಗಳಲ್ಲಿ ಶಾರ್ಟ್ ಸರ್ಕಟ್ ಸಂಭವಿಸುತ್ತಿದೆ. ವಿದ್ಯುತ್ ತಂತಿ ತೆರವುಗೊಳಿಸಲು ಕಳೆದ ನಾಲ್ಕು ವರ್ಷಗಳ ಹಿಂದೆಯೇ ಅನುದಾನ ಬಿಡುಗಡೆಯಾಗಿದೆ. ಆದ್ದರಿಂದ ತಕ್ಷಣ ಹೊಸ ವಿದ್ಯುತ್ ತಂತಿ ಅಳವಡಿಸುವ ಕಾರ್ಯ ಕೈಗೊಳ್ಳುವಂತೆ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net