ಆತಂಕ ಸೃಷ್ಟಿಸಿದ ರೈಲಿನ ಇಂಜಿನ್ ಹಾರ್ನ್

3 vikram 8
Published on

ಧಾರವಾಡ: ಹುಬ್ಬಳ್ಳಿಯಿಂದ ಧಾರವಾಡಕ್ಕೆ ಆಗಮಿಸಿದ ಸರಕು ಸಾಗಣೆ ರೈಲಿನ ಇಂಜಿನ್ 20 ನಿಮಿಷಕ್ಕಿಂತ ಹೆಚ್ಚು ಹೊತ್ತು ನಿರಂತರವಾಗಿ ಶಬ್ದ(ಹಾರ್ನ್) ಮಾಡಿದ್ದರಿಂದ ಸುತ್ತಲಿನ ನಿವಾಸಿಗಳು ಕೆಲ ಕಾಲ ಆತಂಕಿತರಾದ ಘಟನೆ ಸೋಮವಾರ ನಡೆಯಿತು.

ಮಧ್ಯಾಹ್ನ ಅಂದಾಜು 3.30ಕ್ಕೆ ಆಗಮಿಸಿದ ರೈಲು ಇಂಜಿನ್ ನಿರಂತರ ಶಬ್ದ ಮಾಡಲು ಪ್ರಾರಂಭಿಸಿತು. ಇದರಿಂದ ರೈಲ್ವೆ ಸ್ಟೇಶನ್ ಸಿಬ್ಬಂದಿ ಸಹ ಗೊಂದಲಕ್ಕೀಡಾಗಿದ್ದರು. ತಪಾಸಣೆ ನಡೆಸಿದಾಗ ತಾಂತ್ರಿಕ ದೋಷದಿಂದ ಈ ಸಮಸ್ಯೆ ಎದುರಾಗಿದೆ ಎಂಬುದು ತಿಳಿದು ಬಂದಿತು.

ಕೂಡಲೇ ಸ್ಥಳಕ್ಕೆ ಆಗಮಿಸಿದ ತಾಂತ್ರಿಕ ಸಿಬ್ಬಂದಿ ದುರಸ್ತಿ ಕಾರ್ಯ ನಡೆಸಿ, ಸಮಸ್ಯೆ ಪರಿಹರಿಸಿದರು. ಸುತ್ತಲಿನ ಕೆಲ ನಿವಾಸಿಗಳು ಇದೇನೊ ಅಪಾಯದ ಮುನ್ಸೂಚನೆಯ ಸೈರನ್ ಎಂದು ಭಾವಿಸಿ, ಮಾಹಿತಿಗಾಗಿ ಪರದಾಡಿದರು. ತುಸು ದೂರದವರು ಸಹ ಕಿರಿಕಿರಿ ಅನುಭವಿಸಿದರು.

ಅನೇಕರು ಕುತೂಹಲದಿಂದ ರೈಲ್ವೆ ನಿಲ್ದಾಣಕ್ಕೆ ಧಾವಿಸಿದ್ದರು. ಆದರೆ, ತಾಂತ್ರಿಕ ತೊಂದರೆಯಿಂದ ಈ ರೀತಿ ಶಬ್ದ ಮಾಡುತ್ತಿದೆ ಎಂಬ ಮಾಹಿತಿ ಅರಿತು ನಿರಾತಂಕದಿಂದ ಮನೆಯತ್ತ ತೆರಳಿದರು. ತಾಂತ್ರಿಕ ಸಿಬ್ಬಂದಿ ಸಮಸ್ಯೆ ಪರಿಹರಿಸಿದ ಬಳಿಕ ರೈಲು ಮುಂದಕ್ಕೆ ಚಲಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net