

ಗಜೇಂದ್ರಗಡ: ಮುಂಜಾಗ್ರತೆ ಕ್ರಮ ಕೈಗೊಳ್ಳುವುದರಿಂದ ಕರೊನಾ ವೈರಸ್ ಹರಡದಂತೆ ತಡೆಗಟ್ಟಬಹುದು ಎಂದು ಭಗವಾನ್ ಮಹಾವೀರ ಆಯುರ್ವೆದಿಕ್ ಕಾಲೇಜಿನ ಕಾರ್ಯದರ್ಶಿ ಅಜೀತ ಬಾಗಮಾರ ಹೇಳಿದರು.
ಪಟ್ಟಣದಲ್ಲಿ ಬಾಗಮಾರ ಸೇವಾ ಸಮಿತಿ ಹಾಗೂ ಭಗವಾನ್ ಮಹಾವೀರ ಜೈನ್ ಆಯುರ್ವೆದಿಕ್ ಕಾಲೇಜಿನ ಆಶ್ರಯದಲ್ಲಿ ಗುರುವಾರ ಸಾರ್ವಜನಿಕರಿಗೆ ಮತ್ತು ಗ್ರಾಹಕರಿಗೆ ಉಚಿತವಾಗಿ ಮಾಸ್ಕ್ ವಿತರಿಸಿ ಅವರು ಮಾತನಾಡಿದರು.
ಸಾರ್ವಜನಿಕರು ರೋಗದ ಬಗ್ಗೆ ಆತಂಕಕ್ಕೆ ಒಳಗಾಗುವ ಬದಲು ಆರೋಗ್ಯ ಇಲಾಖೆ ಸೂಚಿಸಿರುವ ಎಚ್ಚರಿಕೆಯ ಕ್ರಮಗಳನ್ನು ಪಾಲಿಸಿದರೆ ರೋಗಕ್ಕೆ ಕಡಿವಾಣ ಹಾಕಬಹುದು. ವಾರಾಂತ್ಯದೊಳಗೆ ಸ್ಥಳೀಯ ಸಾರಿಗೆ ಘಟಕದ ಸಿಬ್ಬಂದಿಗೆ ಹಾಗೂ ಬಸ್ನಲ್ಲಿ ಪ್ರಯಾಣಿಸುವವರಿಗೆ ಉಚಿತವಾಗಿ ಮಾಸ್ಕ್ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.