ಆಣೆ ಮಾಡಲು ಹೋದ ಯುವಕರಿಬ್ಬರು ನೀರುಪಾಲು

hhyd-1
Published on

ಹಾಸನ: ತಾಲೂಕು ತೇಜೂರು ಗ್ರಾಮದ ಇಬ್ಬರು ಯುವಕರ ನಡುವೆ ಹಣಕಾಸು ವ್ಯವಹಾರದ ವಿಷಯದಲ್ಲಿ ತಗಾದೆ ಉಂಟಾಗಿ ಗುರುವಾರ ರಾತ್ರಿ ಇಬ್ಬರೂ ಗಂಗೆ (ನೀರು) ಮುಟ್ಟಿ ಆಣೆ ಮಾಡಲು ತೇಜೂರು ಕೆರೆಗೆ ಹೋಗಿದ್ದ ಸಂದರ್ಭದಲ್ಲಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.

ತೇಜೂರು ಗ್ರಾಮದ ಚಂದ್ರು (35) ಮತ್ತು ಆನಂದ್ (30) ಮೃತ ಯುವಕರು. ಇಬ್ಬರೂ ಅಡುಗೆ ಕೆಲಸ ಮಾಡಿಕೊಂಡಿದ್ದರು. ಸಿಹಿ ತಿಂಡಿ ತಯಾರಿಸುವ ಕೆಲಸಕ್ಕೆ ಅಡುಗೆ ಗುತ್ತಿಗೆದಾರರಿಂದ ಪಡೆದ ಹಣ ಹಂಚಿಕೊಳ್ಳುವ ಸಂಬಂಧ ಇಬ್ಬರ ನಡುವೆ ಜಗಳ ಉಂಟಾಗಿತ್ತು. ತಾವು ಪರಸ್ಪರ ಮೋಸ ಮಾಡುತ್ತಿಲ್ಲ ಎಂಬುದನ್ನು ಪ್ರಮಾಣೀಕರಿಸಲು ಕೊನೆಗೆ ಇಬ್ಬರೂ ಗಂಗೆ ಮುಟ್ಟಿ ಆಣೆ ಮಾಡಲು ತೇಜೂರು ಕೆರೆಗೆ ತೆರಳಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಶುಕ್ರವಾರ ಬೆಳಗ್ಗೆ ಎರಡೂ ಮೃತದೇಹಗಳನ್ನು ಸ್ಥಳೀಯರ ನೆರವಿನಿಂದ ಅಗ್ನಿಶಾಮಕ ಸಿಬ್ಬಂದಿ ಹೊರ ತೆಗೆದರು. ಜಿಲ್ಲಾ ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶವಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net