

ಮೂಡಿಗೆರೆ: ಎಂಎಲ್‌ಸಿ ಸಿ.ಟಿ.ರವಿ ಅವರಿಗೆ ದೇವರ ಮೇಲೆ ನಂಬಿಕೆ ಇದ್ದರೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣದಡಿ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲು ಒಪ್ಪಿಕೊಳ್ಳಬೇಕು ಎಂದು ಬ್ಲಾಕ್ ಕಾಂಗ್ರೆಸ್ ವಕ್ತಾರ ಮರಗುಂದ ಪ್ರಸನ್ನ ಹೇಳಿದರು.
ಬೆಳಗಾವಿ ಅಧಿವೇಶನದಲ್ಲಿವ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಕೀಳುಮಟ್ಟದ ಪದ ಬಳಸಿಲ್ಲ ಎಂದು ಸಿ.ಟಿ.ರವಿ ವಾದಿಸುತ್ತಿದ್ದಾರೆ. ಸಮರ್ಪಕ ತನಿಖೆ ನಡೆದು ತಪ್ಪಿತಸ್ಥ ಎಂದು ಸಾಬೀತಾದರೆ ಜೈಲುಪಾಲಾಗುವ ಭಯ ಅವರಲ್ಲಿದೆ. ಹಾಗಾಗಿ ಸಿ.ಟಿ.ರವಿ ತನಿಖೆಯ ದಾರಿ ತಪ್ಪಿಸುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿ ಎಂದು ಸಚಿವೆ ಆಹ್ವಾನ ನೀಡಿದರೆ ಆಣೆ ಪ್ರಮಾಣ ಮಾಡಲು ಹಿಂದೇಟು ಹಾಕಿ ಪಲಾಯನ ಮಾಡುತ್ತಿದ್ದಾರೆ. ಇದರಿಂದ ಸಿ.ಟಿ.ರವಿ ಅವರ ಮನಸ್ಥಿತಿ ಏನೆಂದು ಜನರಿಗೆ ಅರ್ಥವಾಗಿದೆ. ಅವರು ಪಲಾಯನ ಮಾಡುವುದು ಹೊಸದಲ್ಲ. ಬೇಕಾಬಿಟ್ಟಿಯಾಗಿ ಮಾತನಾಡುತ್ತಾರೆ. ಅವರ ನಾಲಿಗೆ ಆರ್ಭಟದ ವಿರುದ್ಧ ಜನ ತಿರುಗಿಬಿದ್ದಾಗ ನನಗೇನೂ ಗೊತ್ತಿಲ್ಲ. ನಾನು ಹಾಗೆ ಮಾತನಾಡಿಲ್ಲ ಎಂದು ಪಲಾಯನ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಅವರಿಗೆ ದೇವರ ಮೇಲೆ ನಂಬಿಕೆ ಇದ್ದರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲು ಒಪ್ಪಿಕೊಂಡು ದಿನ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿದರು.