ಆಡೂರಿನಲ್ಲಿ ಬೆಳೆ ಹಾನಿ ಪರಿಶೀಲನೆ

9HNL2
Published on

ವಿಜಯವಾಣಿ ಸುದ್ದಿಜಾಲ ಹಾನಗಲ್ಲ

ತಾಲೂಕಿನ ತಿಳವಳ್ಳಿ ಹಾಗೂ ಆಡೂರು ಗ್ರಾಮಗಳಿಗೆ ಕೇಂದ್ರದ ನೆರೆ ಅಧ್ಯಯನ ತಂಡ ಶುಕ್ರವಾರ ಭೇಟಿ ನೀಡಿ ಬೆಳೆ ಹಾಗೂ ಮನೆ ಹಾನಿ ಪರಿಶೀಲಿಸಿ, ಕೇಂದ್ರ ಸರ್ಕಾರದಿಂದ ಫಲಾನುಭವಿಗಳಿಗೆ ಸೂಕ್ತ ಪರಿಹಾರ ಬಿಡುಗಡೆಗೊಳಿಸುವ ಭರವಸೆ ನೀಡಿದರು.

ಕೇಂದ್ರ ಸರ್ಕಾರದಿಂದ ನಿಯುಕ್ತಿಗೊಂಡ ಅಧಿಕಾರಿಗಳಾದ ವಿ. ಅಶೋಕಕುಮಾರ, ವಿ.ವಿ. ಶಾಸ್ತ್ರಿ, ಡಾ. ಜಿ.ಎಸ್. ಶ್ರೀನಿವಾಸರೆಡ್ಡಿ ಅವರನ್ನೊಳಗೊಂಡ ತಂಡ ತಾಲೂಕಿನಲ್ಲಿ ಹಾನಿಗೊಳಗಾದ ಆಯ್ದ ಗ್ರಾಮಗಳಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದರು.

ತಾಲೂಕಿನ ತಿಳವಳ್ಳಿಯಲ್ಲಿ ಜಖಂಗೊಂಡಿರುವ ಎರಡು ಮನೆಗಳು, ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡ ಬಿದ್ದಿರುವುದನ್ನು ವೀಕ್ಷಿಸಿದರು. ನಂತರ ಆಡೂರ ಗ್ರಾಮದ ಸಮೀಪ ಗೋವಿನಜೋಳ ಹಾಗೂ ಸೋಯಾಅವರೆ ಬೆಳೆದ ಹೊಲಗಳನ್ನು ಪರಿಶೀಲಿಸಿದರು.

ರೈತ ಮುಖಂಡ ಸಿದ್ದಲಿಂಗಪ್ಪ ಶಂಕ್ರಿಕೊಪ್ಪ ಮಾತನಾಡಿ, ಜೂನ್​ನಲ್ಲಿ ಬಿತ್ತಿದ ಬೀಜ ಮಳೆಯಾಗದೇ ಮೊಳಕೆಯೊಡೆಯಲಿಲ್ಲ, ನಂತರ ಜುಲೈ ಮೊದಲ ವಾರದಲ್ಲಿ ಮರುಬಿತ್ತನೆ ಮಾಡಿದೆವು. ಆಗಿನಿಂದ ಮಳೆ ಶುರುವಾಗಿದ್ದರಿಂದ ಬೆಳೆ ನೆಲ ಬಿಟ್ಟು ಮೇಲೇಳಲಿಲ್ಲ. ಜುಲೈ, ಆಗಸ್ಟ್ ಸೆಪ್ಟೆಂಬರ್ ಮೂರು ತಿಂಗಳಿನಿಂದ ಮಳೆ ಸುರಿಯುತ್ತಿದೆ. ಹೀಗಾಗಿ, ಜೌಳು ಹಿಡಿದು ಬೆಳೆ ನೆಲ ಬಿಟ್ಟು ಮೇಲೆದ್ದಿಲ್ಲ. ಸೋಯಾಅವರೆ ಬೀಜ ಬಿತ್ತಿದ ರೈತರು ಸತತ ಮಳೆಯಿಂದ ಕಾಯಿಗಳು ಬೆಳೆದಿಲ್ಲ. ಇದಕ್ಕೆ ಮಾಡಿರುವ ಖರ್ಚೂ ಬರದಂತಾಗಿದೆ. ಮಳೆಗಾಲ ಮುಗಿದರೆ, ಬೇರೆ ಬೆಳೆಯನ್ನು ಬೆಳೆಯಲು ರೈತರ ಬಳಿ ಹಣವಿಲ್ಲ. ಸರ್ಕಾರ ಸಾಧ್ಯವಾದಷ್ಟೂ ಬೇಗನೇ ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳ ಎದುರು ಅಳಲು ತೋಡಿಕೊಂಡರು.

ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ ಅವರು, ಫಸಲು ಹೇಗೆ ಬರಬೇಕಿತ್ತು. ಈಗ ಆಗಿರುವ ಮಳೆಯಿಂದ ಬೆಳೆ ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದನ್ನು ಕೇಂದ್ರದ ತಂಡದ ಅಧಿಕಾರಿಗಳಿಗೆ ವಿವರಿಸಿದರು. ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಪಂ ಸಿಇಒ ಮಹಮ್ಮದ್ ರೋಶನ್, ಸವಣೂರ ಎಸಿ ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ, ಸಹಾಯಕ ಕೃಷಿ ನಿರ್ದೇಶಕ ದೇವೇಂದ್ರಪ್ಪ ಕಡ್ಲೇರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಲ್. ಪ್ರದೀಪ್, ಸಹಾಯಕ ನಿರ್ದೇಶಕ ಮಂಜುನಾಥ ಬಣಕಾರ, ತಾಪಂ ಇಒ ಬಿ. ಸುನೀಲಕುಮಾರ, ಜಿಪಂ ಕಿರಿಯ ಇಂಜಿನಿಯರ್ ಎನ್.ಎಂ. ಪಾಟೀಲ ಉಪಸ್ಥಿತರಿದ್ದರು.

ಪ್ರಸ್ತುತ ಮಳೆಗಾಲದಲ್ಲಿ ತಾಲೂಕಿನಲ್ಲಿ 11 ಸಾವಿರ ಹೆಕ್ಟೇರ್​ಗಿಂತ ಹೆಚ್ಚು ಜಮೀನಿನಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ. 1300ಕ್ಕಿಂತ ಹೆಚ್ಚು ಮನೆಗಳು ಹಾನಿಯಾಗಿವೆ. 255 ಹೆ. ತೋಟಗಾರಿಕೆ ಬೆಳೆ ಹಾನಿಯಾಗಿದೆ. 33 ಕೆರೆಗಳು ಒಡೆದಿವೆ. 269 ಕಿ.ಮೀ. ರಸ್ತೆ ಹಾಳಾಗಿದೆ. 108 ವಿದ್ಯುತ್ ಕಂಬಗಳು ಬಿದ್ದಿವೆ. 103 ಶಾಲಾ ಕೊಠಡಿಗಳು ನೆಲಕ್ಕುರುಳಿವೆ. 3 ಅಂಗನವಾಡಿ ಕಟ್ಟಡಗಳು ಭಾಗಶಃ ಹಾನಿಯಾಗಿವೆ ಎಂಬುದನ್ನು ಕೇಂದ್ರ ತಂಡದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.| ಪಿ.ಎಸ್. ಎರ್ರಿಸ್ವಾಮಿ ತಹಸೀಲ್ದಾರ ಹಾನಗಲ್ಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net