ಆಡುಗಳ ಮೇಲೆ ಚಿರತೆ ದಾಳಿ ಖಂಡಿಸಿ ಪ್ರತಿಭಟನೆ

15pnd4
Published on

ಪಾಂಡವಪುರ: ತಾಲೂಕಿನ ಟಿ.ಎಸ್.ಛತ್ರ ಗ್ರಾಮದಲ್ಲಿ ಮಾಯಿಗೌಡ ಅವರ ಆಡುಗಳ ಮೇಲೆ ಚಿರತೆ ದಾಳಿ ನಡೆಸಿದ್ದು, 12 ಆಡುಗಳನ್ನು ಕೊಂದುಹಾಕಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳ ನಡೆ ಖಂಡಿಸಿ ಗ್ರಾಮಸ್ಥರು ಮೃತ ಆಡುಗಳನ್ನು ರಸ್ತೆಯ ಮಧ್ಯೆಇಟ್ಟು ಮಂಗಳವಾರ ಪ್ರತಿಭಟನೆ ನಡೆಸಿದರು.

ಟಿ.ಎಸ್.ಛತ್ರ ಗ್ರಾಮದ ರೈತ ಮಾಯಿಗೌಡ ಅವರ ದನದ ಕೊಟ್ಟಿಗೆಯಲ್ಲಿ ಕಟ್ಟುಹಾಕಿದ್ದ ಆಡುಗಳ ಮೇಲೆ ಮಂಗಳವಾರ ಮಂಜಾನೆ ಚಿರತೆ ದಾಳಿ ನಡೆಸಿ 12 ಆಡುಗಳನ್ನು ಕೊಂದುಹಾಕಿದೆ. ಮುಂಜಾನೆ ಕೊಟ್ಟಿಗೆ ತೆರೆದಾಗ ಘಟನೆ ಬೆಳಕಿಗೆ ಬಂದಿದೆ.

ತಕ್ಷಣ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಆದರೆ ಅರಣ್ಯಾಧಿಕಾರಿಗಳು ಮಧ್ಯಾಹ್ನವಾದರೂ ಸ್ಥಳಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ಮೃತಪಟ್ಟ ಆಡುಗಳನ್ನು ಶ್ರೀರಂಗಪಟ್ಟಣ-ಜೇವರ್ಗಿ ಹೆದ್ದಾರೆಯ ಮಧ್ಯೆ ಇಟ್ಟು ಪ್ರತಿಭಟನೆ ನಡೆಸಿದರು.

ತಾಲೂಕಿನಲ್ಲಿ ಚಿರತೆಗಳ ಹಾವಳಿ ದಿನೇ ದಿನೆ ಹೆಚ್ಚಾಗುತ್ತಿದೆ. ಕಳೆದ ಮೂರು ದಿನಗಳ ಹಿಂದೆಯಷ್ಟೆ ಟಿ.ಎಸ್.ಛತ್ರ ಪಕ್ಕದ ಇಂಗಲಕುಪ್ಪೆ ಗ್ರಾಮದಲ್ಲಿ ಕೊಟ್ಟಿಗೆ ಮೇಲೆ ಚಿರತೆ ದಾಳಿ ನಡೆಸಿ ಮೂರು ಆಡುಗಳನ್ನು ಕೊಂದು ಪರಾರಿಯಾಗಿತ್ತು. ಆದರೆ, ಅರಣ್ಯಾಧಿಕಾರಿಗಳು ಚಿರತೆಯ ಸೆರೆಗೆ ಯಾವುದೇ ಕ್ರಮ ಜರುಗಿಸಲಿಲ್ಲ. ಘಟನೆ ನಡೆದು ಮೂರೇ ದಿನಕ್ಕೆ ಮತ್ತೆ ಪಕ್ಕದ ಗ್ರಾಮದಲ್ಲಿ ಘಟನೆ ನಡೆದಿದೆ. ಈ ಘಟನೆಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣವಾಗಿದೆ. ಘಟನೆಯಿಂದಾಗಿ ರೈತ ಮಾಯಿಗೌಡರಿಗೆ ಲಕ್ಷಾಂತರ ರೂ.ನಷ್ಟ ಉಂಟಾಗಿದೆ. ಹಾಗಾಗಿ ಸಂಬಂಧಿಸಿದ ಅರಣ್ಯ ಇಲಾಖೆಯ ಮೇಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರೈತ ಮಾಯಿಗೌಡ ಅವರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಿಂದಾಗಿ ಹೆದ್ದಾರೆಯಲ್ಲಿ ಸಂಚಾರ ಅಸ್ತವ್ಯಸ್ತವಾಯಿತು. ವಾಹನ ಸವಾರರು ಪರದಾಟ ನಡೆಸಿದರು.

ಬಳಿಕ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಚರ್ಚಿಸಿ ಪರಿಹಾರ ದೊರಕಿಸಿಕೊಡುವುದರ ಜತೆಗೆ ಚಿರತೆ ಸೆರೆಗೆ ಬೋನು ಇಡಲಾಗುವುದು ಎಂಬ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆದರು.

ಪ್ರತಿಭಟನೆಯಲ್ಲಿ ಟಿ.ಎಸ್.ಛತ್ರ, ಇಂಗಲಕುಪ್ಪೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net