

ಮದ್ದೂರು: ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನ ಆವರಣದಲ್ಲಿ 3.50 ಕೋಟಿ ರೂ.ಗಳ ವೆಚ್ಚದ ಆಡಿಟೋರಿಯಂ ನಿರ್ಮಾಣಕ್ಕೆ ಶಾಸಕ ಕೆ.ಎಂ.ಉದಯ್ ಬುಧವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, 25 ವರ್ಷಗಳ ಇತಿಹಾಸ ಹೊಂದಿರುವ ಸರ್ಕಾರಿ ಮಹಿಳಾ ಕಾಲೇಜಿನ ಸವಾರ್ಂಗೀಣ ಅಭಿವೃದ್ಧಿಗೆ ಮಹತ್ವದ ಹೆಜ್ಜೆ ಇಡಲಾಗಿದೆ. ಈ ಬಗ್ಗೆ ಒಂದು ವರ್ಷದಿಂದ ಶ್ರಮಿಸಿದ ಪರಿಣಾಮ ಇಂದು ಮಹತ್ವದ ಆಡಿಟೋರಿಯಂ ನಿರ್ಮಾಣಕ್ಕೆ ಚಾಲನೆ ನೀಡಿದ್ದೇನೆ ಎಂದರು.
ಉನ್ನತ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ಗೃಹ ಮಂಡಳಿಯ ಸಹಯೋಗದೊಂದಿಗೆ ಅನುಮೋದನೆ ಪಡೆದು 3.50 ಕೋಟಿ ರೂ. ವೆಚ್ಚದಲ್ಲಿ ಆಡಿಟೋರಿಯಂ ಹಾಗೂ ಹೆಚ್ಚುವರಿ ತರಗತಿ ಕೊಠಡಿಗಳ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಎಂದರು.
ಈಗಾಗಲೇ ಈ ಕಾಲೇಜಿನಲ್ಲಿ ಹಲವು ಮೂಲ ಸೌಕರ್ಯಗಳ ಕಲ್ಪಸಿಲು ಒತ್ತು ನೀಡಲಾಗಿದ್ದು, ಗ್ರಾಮೀಣ ಭಾಗದ ರೈತರ ಮಕ್ಕಳಿಗೆ ಸುಲಭವಾಗಿ ಗುಣಮಟ್ಟದ ಉನ್ನತ ಶಿಕ್ಷಣ ಪಡೆಯುವ ಅವಕಾಶ ಇದರಿಂದ ಹೆಚ್ಚಾಗಲಿ. ಮುಂದಿನ ದಿನಗಳಲ್ಲಿ ಈ ನಿರ್ಮಾಣ ಕಾರ್ಯಗಳು ವಿದ್ಯಾರ್ಥಿಗಳ ಅಕಾಡೆಮಿಕ್ ಹಾಗೂ ಸಹಪಠ್ಯ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡಲಿವೆ ಎಂದರು.
ತಾಲೂಕಿನ ಸರ್ಕಾರಿ ಶಾಲಾ, ಕಾಲೇಜುಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರದ ಜತೆಗೆ ಕದಲೂರು ಚಾರಿಟಬಲ್ ಟ್ರಸ್ಟ್ ನಿರಂತರವಾಗಿ ಕೈ ಜೋಡಿಸಿಕೊಂಡು ಬರುತ್ತಿದ್ದು, ಶಿಥಿಲಗೊಂಡು ಸರ್ಕಾರಿ ಶಾಲೆಗಳ ಕಟ್ಟಡ ನಿರ್ಮಾಣ, ದುರಸ್ತಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸ್ಕೂಲ್ ಬ್ಯಾಗ್, ಪಠ್ಯಕ್ಕೆ ಸಂಬಂಧಿಸಿದ ಪರಿಕರಗಳು, 1ರಿಂದ 10ನೇ ತರಗತಿವರೆಗಿನ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಶುಲ್ಕ ಭರಿಸುವುದು ಸೇರಿದಂತೆ ಹಲವಾರು ಸೌಲಭ್ಯಗಳನ್ನು ಟ್ರಸ್ಟ್ ವತಿಯಿಂದ ನೀಡುವ ಮೂಲಕ ಸರ್ಕಾರಿ ಶಾಲೆಗಳು ಉಳಿಯುವ ನಿಟ್ಟಿನಲ್ಲಿ ನಿರಂತರವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಪುರಸಭಾಧ್ಯಕ್ಷೆ ಕೋಕಿಲಾ ಅರುಣ್, ಉಪಾಧ್ಯಕ್ಷ ಪ್ರಸನ್ನ, ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಪುರಸಭಾ ಸದಸ್ಯರಾದ ಸರ್ವಮಂಗಳಾ, ಎಂ.ಬಿ.ಸಚ್ಚಿನ್, ಸಿದ್ದರಾಜು, ಮನ್ ಮುಲ್ ನಿರ್ದೇಶಕ ಹರೀಶ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೆಲುವರಾಜು, ತಾಲೂಕು ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶಂಕರೇಗೌಡ, ಪ್ರಾಂಶುಪಾಲ ನಾರಾಯಣ್ ಸೇರಿದಂತೆ ಹಲವರು ಇದ್ದರು.