

ಪಿರಿಯಾಪಟ್ಟಣ: ಮತ್ತೊಬ್ಬರ ಸಂಕಷ್ಟದಲ್ಲಿ ನೆರವಾಗುವ ಮನೋಭಾವನೆಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ತಾಲೂಕು ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ತಿಳಿಸಿದರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಂಪ್ಯೂಟರ್ ಲ್ಯಾಬ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಮಟ್ಟದ ಸರ್ಕಾರಿ ಶಾಲಾ ಕಾಲೇಜುಗಳಿಗೆ ಉತ್ತಮ ಗುಣಮಟ್ಟದ ಮೂಲಸೌಕರ್ಯಗಳು ಇದ್ದಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ನೆರವಾಗಲಿದೆ. ಈ ನಿಟ್ಟಿನಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು 8 ಕಂಪ್ಯೂಟರ್‌ಗಳನ್ನು ಕಾಲೇಜಿಗೆ ನೀಡಿರುವುದು ಶ್ಲಾಘನೀಯ. ಕಲಿತ ಶಾಲೆಗೆ ಏನನ್ನಾದರೂ ಕೊಡುಗೆ ನೀಡಬೇಕು ಎಂದರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಈಗಾಗಲೇ 50 ವರ್ಷಗಳನ್ನು ಪೂರೈಸಿ ಸುವರ್ಣ ಮಹೋತ್ಸವ ಆಚರಣೆಯ ಹೊಸ್ತಿಲಲ್ಲಿದೆ. ಕಾಲೇಜಿಗೆ ಅಗತ್ಯವಿರುವ ಆಡಿಟೋರಿಯಂ, ಕಾಂಪೌಂಡ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಚಿವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಪ್ರಾಂಶುಪಾಲ ಶಿವಶಂಕರ್ ಮಾತನಾಡಿ, ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಪ್ರತಿ ವರ್ಷವೂ ಹೆಚ್ಚಳವಾಗುತ್ತಿದೆ. ಶೈಕ್ಷಣಿಕ ಗುಣಮಟ್ಟವೂ ಸುಧಾರಣೆಯಲ್ಲಿದೆ. ಕಳೆದ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಲೇಜಿನ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ್ದಾರೆ. ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಕಾಲೇಜಿಗೆ ಸುಸಜ್ಜಿತವಾದ ಆಡಿಟೋರಿಯಂ, ಕಾಂಪೌಂಡ್, ಶೌಚಾಲಯ ಸೇರಿದಂತೆ ಮೂಲಸೌಕರ್ಯಗಳ ಅಗತ್ಯವಿದೆ ಎಂದರು.
ಸಿಡಿಸಿ ಸದಸ್ಯ ಟಿ.ಈರಯ್ಯ, ಹಿರಿಯ ವಿದ್ಯಾರ್ಥಿಗಳಾದ ಹೇಮಂತ್ ಕುಮಾರ್, ಪಿ.ಜೆ.ಮೋಹನ್ ಕುಮಾರ್, ಎಸ್.ಜೆ.ಸುರೇಶ್, ನಟರಾಜ್, ಮಂಜು ಕುಮಾರನ್, ನಝಮ್ ರಜಾ, ಸಿ.ಎನ್.ವಿಜಯ್, ರಮೇಶ್, ಮಹಮ್ಮದ್ ಶಫಿ, ವೇಣುಗೋಪಾಲ್ ಇದ್ದರು.