

ಹುಲಸೂರು: ತಾಲೂಕು ಅಸ್ತಿತ್ವಕ್ಕೆ ಬಂದು ಆರು ವರ್ಷವಾದರೂ ಸರ್ಕಾರ ಎಂ.ಬಿ.ಪ್ರಕಾಶ ಆಯೋಗದ ಪ್ರಕಾರ ಹಳ್ಳಿ ಹಾಗೂ ಗ್ರಾಮ ಪಂಚಾಯಿತಿ ಕೇಂದ್ರಗಳು ಮತ್ತು ೬೩೩.೬೧ ಚ.ಕಿ.ಮೀ. ಭೂಮಿ ನೀಡಲು ನಿರ್ಲಕ್ಷಿಸುತ್ತಿದೆ. ಆಡಳಿತ ಕಚೇರಿಗಳನ್ನು ಪ್ರಾರಂಭಿಸಬೇಕು ಎಂದು ಬಸವಕಲ್ಯಾಣ ಜಿಲ್ಲಾ ಕೇಂದ್ರ ರಚನೆ ಹೋರಾಟ ಸಮಿತಿ ಸಂಚಾಲಕ ಎಂ.ಜಿ.ರಾಜೋಳೆ ಒತ್ತಾಯಿಸಿದ್ದಾರೆ.
ಸರ್ಕಾರ ಬಸವಕಲ್ಯಾಣ ತಾಲೂಕಿನ ೧೮ ಹಳ್ಳಿ ಹಾಗೂ ೩ ತಾಂಡಾ ಸೇರಿಸಿ ನಾಮ್ ಕೇ ವಾಸ್ತೆ ತಾಲೂಕು ಘೋಷಿಸಿದ್ದಾರೆ. ನಮ್ಮ ಹೋರಾಟದ ಪ್ರತಿಫಲದಿಂದ ಕೆಲ ತಿಂಗಳ ಹಿಂದೆ ಭಾಲ್ಕಿ ತಾಲೂಕಿನ ಸಾಯಿಗಾಂವ ಜಿಪಂ ಕ್ಷೇತ್ರದ ೧೬ ಹಳ್ಳಿ ಹಾಗೂ ೬ ಗ್ರಾಮ ಪಂಚಾಯಿತಿ ಹುಲಸೂರು ತಾಲೂಕಿಗೆ ಸೇರ್ಪಡೆ ಮಾಡಿ, ರಾಜ್ಯ ಸರ್ಕಾರ ಆದೇಶಿಸಿದೆ. ಪತ್ರ ಸಹ ಪ್ರಕಟಿಸಿದ್ದಾರೆ. ಆದರೆ ಇನ್ನೂ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಆರೋಪಿಸಿದ್ದಾರೆ. ತಾಪಂ ಹಾಗೂ ಜಿಪಂ ಚುನಾವಣೆಗಳು ಹುಲಸೂರು ತಾಲೂಕು ಕೇಂದ್ರದ ಅಧೀನದಲ್ಲೇ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಸಿಇಒಗೆ ಮನವಿ: ಹುಲಸೂರು ತಾಲೂಕಿಗೆ ಭಾಲ್ಕಿ ತಾಲೂಕಿನ ಸಾಯಿಗಾಂವ ಜಿಪಂ ಕ್ಷೇತ್ರದ ೧೬ ಹಳ್ಳಿ ಹಾಗೂ ೬ ಗ್ರಾಮ ಪಂಚಾಯಿತಿಗಳು ಶೀಘ್ರ ಸೇರ್ಪಡೆ ಆಗಬೇಕು ಎಂದು ರಾಜ್ಯ ಸರ್ಕಾರ ಗೆಜೆಟ್ ಪ್ರಕಟಣೆ ಮಾಡಿದೆ. ಆದರೆ ಅಧಿಕಾರಿಗಳ ನಿರ್ಲಕ್ಷÈದಿಂದ ಹುಲಸೂರು ತಾಲೂಕು ಎಂದು ನಮೂದಿಸಲು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಪ್ರಕ್ರಿಯೆ ಪೂರ್ಣಗೊಳಿಸಿ, ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.