

ಹಾಸನ: ನವೆಂಬರ್ 3ರ ಬಳಿಕ ಎಲ್ಲ ಗೊತ್ತಾಗುತ್ತೆ, ಕೆ.ಆರ್. ಪೇಟೆ ಉಪಚುನಾವಣೆ ಮಾದರಿಯ ಫಲಿತಾಂಶ ಈಗಲೂ ಮರುಕಳಿಸುತ್ತದೆಂಬುದರ ಕುರಿತು ಆಮೇಲೆ ಹೇಳುತ್ತೇನೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದರು.
ನಮ್ಮದು ಬಡವರ ಪಕ್ಷ, ಶಿರಾದಲ್ಲಿ ನಾವು ಬೈಕ್ ಜಾಥಾ ನಡೆಸಿದರೆ ಅವರು ಕಾರಿನಲ್ಲಿ ಮೆರವಣಿಗೆ ಮಾಡಿದ್ದಾರೆ. ದೇವೇಗೌಡರು, ಕುಮಾರಣ್ಣ ಹೊರತುಪಡಿಸಿದರೆ ನಮ್ಮಲ್ಲಿ ಕಾರುಗಳಿಲ್ಲ. ಆದರೆ ಬಿಜೆಪಿ ಪರವಾಗಿ ಹಾಸನದಿಂದಲೇ 120 ಕಾರು ಹೋಗಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ರೈತರು ಸಾಯುವ ಸ್ಥಿತಿ ತಲುಪಿದ್ದಾರೆ. ಸಿಎಂ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ಯಾರಾದರೂ ಆಗಲಿ ಜನರನ್ನು ಕಾಪಾಡಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ರಾಜ್ಯದಲ್ಲಿರುವುದು ಹೇಳೋರೋ ಕೇಳೋರು ಇಲ್ಲದ ಸರ್ಕಾರ. ಬಹುಮತ ಇಲ್ಲದಿದ್ದರೂ 48 ಸ್ಥಳೀಯ ಸಂಸ್ಥೆಗಳನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲು ಸರ್ಕಾರ ತೀರ್ಮಾನಿಸಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ನಗರಸಭೆ ಅಧ್ಯಕ್ಷರ ಚುನಾವಣೆ ನಡೆಸಲು ನಗರಾಭಿವೃದ್ಧಿ ಇಲಾಖೆ ಎರಡೂವರೆ ವರ್ಷ ತೆಗೆದುಕೊಂಡಿದೆ. ಈ ಇಲಾಖೆ ಜನಸಾಮಾನ್ಯರ ತೀರ್ಪಿಗೆ ಮನ್ನಣೆ ಕೊಡುತ್ತಿಲ್ಲ. ಒಂದು ರಾಜಕೀಯ ಪಕ್ಷದ ಅಧೀನದಲ್ಲಿ ಕೆಲಸ ಮಾಡುತ್ತಿದೆ. ನಗರಸಭೆ ಮೀಸಲಾತಿ ನಿಗದಿ ಮಾಡಲು ಯಾವ ಯಾವ ಸಚಿವರು ಶಿಫಾರಸ್ಸು ಮಾಡಿದ್ದಾರೆ ಎನ್ನವುದು ಗೊತ್ತಿದೆ. ಸರ್ಕಾರಿ ವಕೀಲರು, ಅಡ್ವೊಕೇಟ್ ಜನರಲ್ ಅವರನ್ನು ಕೇಳಿದರೆ ಕಡತಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿ ಕಚೇರಿ, ಎಸಿ ಆಫೀಸ್ ನಲ್ಲಿ ರಾತ್ರಿಯೆಲ್ಲ ಕೆಲಸ ಮಾಡುತ್ತಾರೆ. 21 ವರ್ಷ ರಾಜಕೀಯ ಮಾಡಿದ್ದೇನೆ, ಇಂತಹ ಭ್ರಷ್ಟ ಸರ್ಕಾರ ನೋಡಿರಲಿಲ್ಲ. ನ್ಯಾಯಾಲಯಕ್ಕೂ ಸರ್ಕಾರ ಸರಿಯಾದ ಮಾಹಿತಿ ನೀಡುತ್ತಿಲ್ಲ. ನ್ಯಾಯಾಲಯದ ಕೆಲವು ಆದೇಶವನ್ನು ಸರ್ಕಾರ ಧಿಕ್ಕರಿಸುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಏನಾಗುತ್ತದೋ. ಈ ಸರ್ಕಾರ ಜನಸಾಮಾನ್ಯರ ಹಿತಕಾಯುವಲ್ಲಿ ವಿಫಲವಾಗಿದೆ.
ಅಡ್ವೋಕೇಟ್ ಜನರಲ್ ಸರ್ಕಾರದ ಕೈಗೊಂಬೆಯಾಗಿದ್ದಾರೆ.ಕೋರ್ಟ್ ಗೂ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ದೂರಿದರು.