

ಚಿಂತಾಮಣಿ : ಅನುದಾನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ವಿರೋಧ ಪಕ್ಷದ ಸದಸ್ಯರು ಸಭೆ ಬಹಿಷ್ಕರಿಸಿದರು.
ತಾಪಂ ಸಭಾಂಗಣದಲ್ಲಿ ಸೋಮವಾರ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಅಧ್ಯಕ್ಷೆ ಕವಿತಾ ಮಂಜುನಾಥ್, ಪ್ರಸಕ್ತ ಸಾಲಿನಲ್ಲಿ ತಾಪಂ ವ್ಯಾಪ್ತಿಗೆ ಅನಿರ್ಬಂಧಿತ ಯೋಜನೆಯಡಿ ನಿಗದಿಪಡಿಸುವ ಅನುದಾನಕ್ಕೆ ಕ್ರಿಯಾಯೋಜನೆ ತಯಾರಿಸಿ ಅನುಮೋದನೆ ನೀಡುವ ಬಗ್ಗೆ ಪ್ರಸ್ತಾಪಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸದಸ್ಯ ನರಸಿಂಹರಾಜು 2017-18ನೇ ಸಾಲಿನ ಶೇ.3ರ ಅನುದಾನದಲ್ಲಿ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ, 2019-20ನೇ ಸಾಲಿನ ಮುದ್ರಾಂಕ ಶುಲ್ಕದ ಕ್ರಿಯಾಯೋಜನೆ, 2018-19ನೇ ಸಾಲಿನ ಅನಿರ್ಬಂಧಿತ ಅಭಿವೃದ್ಧಿ ಕ್ರಿಯಾ ಯೋಜನೆಯ ಕಾಮಗಾರಿ ಮತ್ತು ತಾಪಂ ಅನುಷ್ಠಾನ ಇಲಾಖೆಯಾದ ಶಿಕ್ಷಣ ಇಲಾಖೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಕ್ರಮ ಕೈಗೊಂಡಿಲ್ಲ, ಆದ್ದರಿಂದ ಆ ವಿಷಯಗಳ ಬಗ್ಗೆ ಚರ್ಚಿಸುವಂತೆ ಪಟ್ಟು ಹಿಡಿದರು. ಅಜೆಂಡಾದಂತೆ ಸಭೆ ನಡೆಯಲಿ, ನಂತರ ಅಧ್ಯಕ್ಷರ ಅಪ್ಪಣೆ ಮೇರೆಗೆ ಇತರ ವಿಷಯಗಳನ್ನು ಚರ್ಚಿಸೋಣ ಎಂದು ಸದಸ್ಯರು ಪಟ್ಟು ಹಿಡಿದಾಗ ಆಡಳಿತ ಮತ್ತು ವಿರೋಧ ಪಕ್ಷದವರ ನಡುವೆ ಮಾತಿನ ಜಟಾಪಟಿ ನಡೆಯಿತು. ಕೊನೆಗೆ ತಾಪಂ ಅಧ್ಯಕ್ಷೆ ಮಧ್ಯೆ ಪ್ರವೇಶಿಸಿ ನಿಮ್ಮ ಸಮಸ್ಯೆ ಬಗ್ಗೆ ಇಒ ಗಮನಕ್ಕೆ ತನ್ನಿ, ಅವ್ಯವಹಾರ ನಡೆದಿದ್ದರೆ ಅವರು ತನಿಖೆ ಮಾಡುತ್ತಾರೆ ಎಂದಾಗ ವಿರೋಧ ಪಕ್ಷದ ಸದಸ್ಯರು ಸಭೆ ಬಹಿಷ್ಕರಿಸಿದರು.