

ಮಳವಳ್ಳಿ: ಪಟ್ಟಣದ ತಾಲೂಕು ಕಚೇರಿ, ಸಾರ್ವಜನಿಕ ಆಸ್ಪತ್ರೆ, ಉಪನೋಂದಣಿ ಕಚೇರಿಗಳಿಗೆ ಶುಕ್ರವಾರ ಜಿಲ್ಲಾಧಿಕಾರಿ ಡಾ.ಕುಮಾರ ದಿಢೀರ್ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸುವುದರ ಜತೆಗೆ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸುವುದರ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದರು.
ತಾಲೂಕು ಕಚೇರಿಗೆ ಆಗಮಿಸಿದ ಜಿಲ್ಲಾಧಿಕಾರಿ ಸಾರ್ವಜನಿಕರ ಅಹವಾಲು ಆಲಿಸಿದರು. ನಂತರ ಎಲ್ಲ ಶಾಖೆಗಳಿಗೆ ತೆರಳಿ ಪರಿಶೀಲನೆ ನಡೆಸಿದ ಅವರು, ಆರ್‌ಆರ್‌ಟಿ ವಿಭಾಗದಲ್ಲಿ ಕಡತಗಳ ರಾಶಿಯನ್ನು ನೋಡಿ ವಿಲೆವಾರಿ ಮಾಡದೇ ಏಕೆ ಈ ರೀತಿ ಮುಂದಿಟ್ಟುಕೊಂಡು ಕುಳಿತ್ತಿದ್ದೀರಿ ಎಂದು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ತಾಲೂಕು ಆಡಳಿತದಿಂದ ಆಗಬೇಕಾದ ಜನಸಾಮಾನ್ಯರ ಯಾವುದೇ ಕೆಲಸಗಳಿಗೆ ಇಲ್ಲಸಲ್ಲದ ಸಬೂಬು ಹೇಳಿ ಅಲೆಸುವುದಕ್ಕೆ ಕಡಿವಾಣ ಹಾಕಿ ಶೀಘ್ರವಾಗಿ ನಿಯಮಾನುಸಾರ ಆಗುವ ಕೆಲಸಗಳನ್ನು ಮಾಡಿಕೊಡಿ. ನಿಮ್ಮಗಳ ಆಟೋಟಗಳ ಬಗ್ಗೆ ನನ್ನ ಗಮನಕ್ಕೆ ಬಂದರೇ ಕಾನೂನು ಕ್ರಮ ವಹಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದೇ ವೇಳೆ ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ಜನರು ತಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ವಿನಾಕಾರಣ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸದೇ ಸಮಸ್ಯೆಗಳನ್ನು ತಕ್ಷಣವೇ ವಿಲೇವಾರಿ ಮಾಡುವಂತೆ ಮತ್ತೊಮ್ಮೆ ಖಡಕ್ ಸೂಚನೆ ನೀಡಿದರು.
ನಂತರ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯ ಹೊರ ಮತ್ತು ಒಳ ರೋಗಿಗಳ ಬಗ್ಗೆ ಮಾಹಿತಿ ಕಲೆ ಹಾಕಿದರು. ಚಿಕಿತ್ಸೆಗೆ ಬರುವ ರೋಗಿಗಳನ್ನು ನಿರ್ಲಕ್ಷ್ಯವಹಿಸದೇ ಸೂಕ್ತ ಚಿಕಿತ್ಸೆ ನೀಡುವಂತೆ ತಾಕೀತು ಮಾಡಿದ ಅವರು, ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಸುವಂತೆ ವೈದ್ಯರು ಹಾಗೂ ಸಿಬ್ಬಂದಿಗಳಿ ಸಲಹೆ ನೀಡಿದರು. ಜನರ ಆರೋಗ್ಯ ರಕ್ಷಣೆಗೆ ಬೇಕಾದ ಯಾವುದೇ ಸಮಸ್ಯೆಗಳಿದ್ದರೆ ವರದಿ ನೀಡುವಂತೆ ತಾಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ ಹಾಗೂ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಮಹದೇವನಾಯಕ್ ಅವರಿಗೆ ಸೂಚಿಸಿದರು.
ಉಪನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿ ಕಚೇರಿಯಲ್ಲಿ ಸಿಸಿಟಿವಿ ಇಲ್ಲದಿರುವುದನ್ನು ಗಮನಿಸಿ, ಕಚೇರಿಗೆ ಸಿಸಿಟಿವಿಯನ್ನು ಅಳವಡಿಸಿ ಪಾರದರ್ಶಕತೆಯಿಂದ ಕೆಲಸ ನಿರ್ವಹಣೆ ಮಾಡಲು ಉಪನೋಂದಣಾಧಿಕಾರಿಗೆ ಸೂಚಿಸಿದರು. ಈ ವೇಳೆ ನೋಂದಣಿಗೆ ಬಂದಿದ್ದ ಸಾರ್ವಜನಿಕರೊಡನೆ ಚರ್ಚಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಲೋಕೇಶ್, ಗ್ರೇಡ್-2 ತಹಸೀಲ್ದಾರ್ ಕುಮಾರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.