

ಚಿತ್ರದುರ್ಗ: ಕೇಂದ್ರ ಸರ್ಕಾರದ ಯೋಜನೆಗಳೇಕೆ ವಿಳಂಬವಾಗುತ್ತಿದೆ. ನಿಗದಿತ ಗುರಿಯೊಂದಿಗೆ ಕಾಮಗಾರಿಗಳೇಕೆ ಪೂರ್ಣಗೊಳ್ಳುತ್ತಿಲ್ಲ. ಈ ಸಂಬಂಧ ಅಡ್ಡಿ ಉಂಟಾಗಿದ್ದಲ್ಲಿ ಗಮನಕ್ಕೆ ಏಕೆ ತರುತ್ತಿಲ್ಲ. ಜಿಲ್ಲೆಯಲ್ಲಿ ಆಡಳಿತ ಯಂತ್ರ ಎತ್ತ ಸಾಗುತ್ತಿದೆ…!
ಸಿಎನ್‌ಜಿ ಗ್ಯಾಸ್ ಪೈಪ್‌ಲೈನ್ ಅಳವಡಿಕೆ ಹಾಗೂ 4 ಕಡೆ ಪ್ರಮುಖ ರಸ್ತೆಗಳ ನಿರ್ಮಾಣ ಕುರಿತು ಜಿಲ್ಲಾ ಪಂಚಾಯಿತಿಯ ಮಿನಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಪರಿ ಇದು.
ಜಿಲ್ಲೆಯೊಳಗೆ ಗ್ಯಾಸ್ ಪೈಪ್‌ಲೈನ್ ಅಳವಡಿಕೆ ಸಂಬಂಧ 2019ರಲ್ಲೇ ಕಾಮಗಾರಿ ಆರಂಭವಾಗಿದೆ. 4 ವರ್ಷವಾದರೂ ಸಂಪರ್ಕ ನೀಡಿಲ್ಲ. ಏನಾದರೂ ಸಮಸ್ಯೆಗಳಿದ್ದರೆ ಗಮನಕ್ಕೆ ತನ್ನಿ. ಡಿಸಿ ಅವರೊಂದಿಗೆ ಚರ್ಚಿಸಿ ಬಗೆಹರಿಸೋಣ. ಅದನ್ನು ಬಿಟ್ಟು ಕಾಲಾಹರಣ ಮಾಡುತ್ತ ಕೂತರೆ ಗುರಿ ಮುಟ್ಟೋದು ಯಾವಾಗ ಎಂದು ಬೇಸರಿಸಿದರು.
ಜಿಲ್ಲೆಯಲ್ಲಿ ಪ್ರಸ್ತುತ ಕಾಮಗಾರಿಯ ಸ್ಥಿತಿಗತಿ ಏನು? ಸದ್ಯ ಯಾವ ಹಂತದವರೆಗೂ ಪೂರ್ಣಗೊಂಡಿದೆ. ಎಷ್ಟು ಕಿ.ಮೀ.ವರೆಗೂ ಆಗಿದೆ. ಎಷ್ಟು ಮನೆಗಳಿಗೆ ಸಂಪರ್ಕ ನೀಡಿದ್ದೀರಿ. ಈಗೇಕೆ ಸ್ಥಗಿತಗೊಂಡಿದೆ ಎಂಬ ಮಾಹಿತಿ ನೀಡಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಜಿಎಐಎಲ್) ಮೂಲಕ ಯೋಜನೆ ಕಾರ್ಯರೂಪಕ್ಕೆ ತರಲಾಗುತ್ತಿದ್ದು, ದಾವಣಗೆರೆ-ಚಿತ್ರದುರ್ಗ ವಿಭಾಗದ 1.10 ಲಕ್ಷ ಮನೆಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ. ಚಿತ್ರದುರ್ಗ ನಗರದಲ್ಲಿ 62 ಕಿ.ಮೀ. ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿದ್ದು, 59 ಕಿ.ಮೀ. ಈಗಾಗಲೇ ಪೂರ್ಣಗೊಂಡಿದೆ. 5,500 ಮನೆಗಳಿಗೆ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ. ಅದರಲ್ಲಿ 1,804 ನೋಂದಣಿ ಆಗಿದೆ. 807 ಮನೆಗಳಿಗೆ ಸಂಪರ್ಕ ನೀಡಿದ್ದೇವೆ ಎಂದು ಸಭೆಗೆ ಅಶೋಕ ಗ್ಯಾಸ್ ಕಂಪನಿ ವ್ಯವಸ್ಥಾಪಕರು ಮಾಹಿತಿ ನೀಡಿದರು.
ಅಧಿಕಾರಿಗಳ ಉತ್ತರಕ್ಕೆ ಸಮಾಧಾನಗೊಳ್ಳದ ಸಚಿವರು, ಎಷ್ಟು ಮನೆಯವರು ಈಗಾಗಲೇ ಇದರ ಉಪಯೋಗ ಪಡೆಯುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಜಿಲ್ಲೆಯ ಎಷ್ಟು ಮನೆಗಳಿಗೆ ಸಂಪರ್ಕ ಕಲ್ಪಿಸಲು ಸಿದ್ಧಪಡಿಸಿರುವ ಯೋಜನೆ ಸಮೇತ ಜೂ.5ರೊಳಗೆ ಮಾಹಿತಿ ನೀಡಿ ಎಂದು ಜಿಲ್ಲಾಧಿಕಾರಿ ದಿವ್ಯಾಪ್ರಭು ಕೂಡ ಸೂಚಿಸಿದರು.
ಕೇಂದ್ರ ಸರ್ಕಾರದಿಂದ ಜಿಲ್ಲೆಗೆ ಮಂಜೂರಾದ 4 ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಆದ್ದರಿಂದ ಸಬೂಬು ಹೇಳದೆ ತ್ವರಿತವಾಗಿ ಪೂರ್ಣಗೊಳಿಸಿ. ಅಪಘಾತಗಳ ತಡೆಗೆ ಸಿಗ್ನಲ್ ಅಳವಡಿಕೆ ಸೇರಿ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಿ. ಸಾರ್ವಜನಿಕರ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂದು ಸಚಿವರು ಸೂಚನೆ ನೀಡಿದರು.
ಹೊಳಲ್ಕೆರೆ ಮತ್ತು ಹೊಸದುರ್ಗ ರಾಷ್ಟ್ರೀಯ ಹೆದ್ದಾರಿ 31.7 ಕಿ.ಮೀ. ಉದ್ದವಿದ್ದು, ಹೊಸದುರ್ಗದಿಂದ ಕಾಮಗಾರಿ ಆರಂಭವಾಗಿದೆ. 2024ರ ಏಪ್ರಿಲ್ ಅಂತ್ಯದೊಳಗೆ ಮುಕ್ತಾಯವಾಗಲಿದೆ. ಹಿರಿಯೂರು ಮತ್ತು ಹುಳಿಯಾರು ರಸ್ತೆಯು 31.3 ಕಿ.ಮೀ. ಉದ್ದವಿದ್ದು, ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದರು.
ಜಿಪಂ ಸಿಇಒ ಎಂ.ಎಸ್.ದಿವಾಕರ್, ಎಸ್‌ಪಿ ಕೆ.ಪರಶುರಾಮ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ, ಎಸಿ ಆರ್.ಚಂದ್ರಯ್ಯ ಇತರರಿದ್ದರು.
*ಕೋಟ್
ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಎಲ್ಲಿಯಾದರೂ ತೊಂದರೆ, ಸಮಸ್ಯೆಯಿಂದಾಗಿ ಪ್ರಗತಿ ಕುಂಠಿತವಾದಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು.
ಜಿ.ಆರ್.ಜೆ.ದಿವ್ಯಾಪ್ರಭು, ಜಿಲ್ಲಾಧಿಕಾರಿ
ಅಡುಗೆ ಅನಿಲ 400 ರೂ.ಗೆ ಸಿಗಲಿದೆ
ಅಡುಗೆ ಅನಿಲ ದರ 1,150 ರೂ. ಆಗಿದ್ದು, ಕೇಂದ್ರ ಸರ್ಕಾರ ಬೆಲೆ ಹೆಚ್ಚಿಸುತ್ತಲೇ ಇದೆ ಎಂದು ಬಿಜೆಪಿ ವಿರುದ್ಧ ಗೂಬೆ ಕೂರಿಸುವ ಪ್ರಯತ್ನ ನಡೆಯುತ್ತಿದೆ. ಗೇಲ್ ಯೋಜನೆಯಡಿ ಮನೆಗಳಿಗೆ ಸಂಪರ್ಕ ಕಲ್ಪಿಸಿಕೊಂಡರೆ ಪ್ರತಿ ತಿಂಗಳು ಕೇವಲ 350 ರೂ. ಅಥವಾ 400 ರೂ. ಶುಲ್ಕ ಪಾವತಿಸಬೇಕಷ್ಟೇ. ಈ ಕುರಿತು ಮಾಹಿತಿ ಯಾರೂ ನೀಡುತ್ತಿಲ್ಲ ಎಂದು ಸಚಿವರು ಅಸಮಧಾನ ವ್ಯಕ್ತಪಡಿಸಿದರು. ಅವಕಾಶ ಇರುವೆಡೆ ಜನರ ಮನವೊಲಿಸಿ ಸಂಪರ್ಕ ನೀಡಿ ಎಂದು ತಾಕೀತು ಮಾಡಿದರು.
ಬಡವರಿಗೆ ರಕ್ಷಣೆ ಕೊಡಿ
ಮೊಳಕಾಲ್ಮೂರಿನಲ್ಲಿ ರಸ್ತೆ ಕಾಮಗಾರಿ ಕೈಗೆತ್ತಿಕೊಂಡ ವೇಳೆ ಗೋಡೆಗಳ ತೆರವು ಕಾರ್ಯಾಚರಣೆಯಲ್ಲಿ ಕೆಲವರಿಗೆ ತೊಂದರೆಯಾಗಿದೆ. ಪ್ಲಾಸ್ಟಿಕ್ ಚೀಲ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಅವರ‌್ಯಾರೂ ಮನುಷ್ಯರಲ್ಲವೇ? ಬಡವರಿಗೆ ರಕ್ಷಣೆ ಕೊಡೋದು ಜನಪ್ರತಿನಿಧಿಗಳು, ಅಧಿಕಾರಿಗಳ ಕರ್ತವ್ಯ. ಹೀಗಿದ್ದರೂ ಗೋಡೆ ನಿರ್ಮಿಸಿಕೊಳ್ಳಲು ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಪರಿಹಾರ ಏಕೆ ನೀಡಿಲ್ಲ ಎಂದು ನಾರಾಯಣಸ್ವಾಮಿ ಕಿಡಿಕಾರಿದರು.