ಆಡಳಿತ ನಡೆಸುವವರಿಂದ ರೈತರ ರಕ್ಷಣೆ ಸಾಧ್ಯವಿಲ್ಲ

03-09-Shiva-2
ರಾಯಚೂರಿನ ಜೆಸಿ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ರೈತ ಸಂಘದ ವಿಭಾಗೀಯ ಪದಾಕಾರಿಗಳ ಸಭೆಯಲ್ಲಿ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿದರು. ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಪ್ರಧಾನ ಕಾರ್ಯದರ್ಶಿ ರವಿಕಿರಣ ಪೂಣಚ್ಚ , ವಿಭಾಗೀಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ, ಕಾರ್ಯದರ್ಶಿ ಗೋಪಾಲ ಪಾಪೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಮ್ಮ ಪಾಟೀಲ್ ಇದ್ದರು.
Published on

ರಾಯಚೂರು: ವಿಧಾನಸೌಧದ ಮೂರನೇ ಮಹಡಿ ಮತ್ತು ನವದೆಹಲಿಯ ಸಂಸತ್ ಭವನದಲ್ಲಿ ಕುಳಿತು ಆಡಳಿತ ನಡೆಸುತ್ತಿರುವವರಿಂದ ರೈತ ಸಮುದಾಯವನ್ನು ರಕ್ಷಿಸಲು ಸಾಧ್ಯವಿಲ್ಲ. ರೈತರು ಗಟ್ಟಿ ಹೋರಾಟ ರೂಪಿಸುವ ಮೂಲಕ ನಮ್ಮ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ಸ್ಥಳೀಯ ಜೆಸಿ ಭವನದಲ್ಲಿ ಭಾನುವಾ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ರೈತ ಸಂಘದ ವಿಭಾಗೀಯ ಪದಾಕಾರಿಗಳ ಸಭೆ ಹಾಗೂ ಕಾರ್ಯಾಗಾರದಲ್ಲಿ ಮಾತನಾಡಿ, ಪ್ರಪಂಚದಲ್ಲಿ ಆಗಿರುವ ಬದಲಾವಣೆಗಳು ಬಂಡವಾಳಶಾಹಿಗಳಿಗೆ ಪೂರಕವಾಗಿದ್ದು, ಬಂಡವಾಳಶಾಹಿಗಳ ಕಪಿಮುಷ್ಠಿಯಲ್ಲಿರುವ ಆಡಳಿತಗಾರರನ್ನು ನಂಬುವುದು ಮೂರ್ಖತನ ಎಂದರು.
ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡಿ, ದೇಶದಲ್ಲಿ ಭ್ರಷ್ಟಾಚಾರ ಲಂಗು ಲಗಾಮಿಲ್ಲದೆ ಕುಣಿದಾಡುತ್ತಿದೆ. ಸಲ್ ಭೀಮಾ ಯೋಜನೆಯೂ ಲೂಟಿ ಮಾಡುವ ಯೋಜನೆಯಾಗಿದ್ದು, ಈ ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ ಪೂಣಚ್ಚ ಮಾತನಾಡಿ, ಸಂಘವನ್ನು ಶಿಸ್ತುಬದ್ಧವಾಗಿ, ವೈಚಾರಿಕವಾಗಿ, ಪಾರದರ್ಶಕವಾಗಿ ಮುಂದಿನ ಪೀಳಿಗೆ ಹಸ್ತಾಂತರಿಸಲು ಪೂರಕವಾಗಿ ಸಂಘದ ಪದಾಕಾರಿಗಳು ಯಾವುದೇ ರಾಜಕೀಯ, ಜಾತಿ ಸಂಘಟನೆಯ ಪದಾಕಾರಿಗಳಾಗಿರಬಾರದು ಎಂದರು.
ಸಭೆಯಲ್ಲಿ ರಾಜ್ಯದ ಎಲ್ಲ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿ ಪರಿಹಾರ ಕಾರ್ಯ ಕೈಗೊಳ್ಳಬೇಕು. ರೈತರ ಪಂಪ್‌ಸೆಟ್‌ಗೆ ಕನಿಷ್ಠ 7 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು. ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ನಿಲ್ಲಿಸಬೇಕು. ರಾಜ್ಯಾದ್ಯಂತ ಎಲ್ಲ ಜಿಲ್ಲಾಕಾರಿ ಕಚೇರಿ ಮುಂದೆ ಸೆ.5ರಂದು ಧರಣಿ ನಡೆಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಸಂಘದ ವಿಭಾಗೀಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ, ಕಾರ್ಯದರ್ಶಿ ಗೋಪಾಲ ಪಾಪೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಮ್ಮ ಪಾಟೀಲ್, ಉಪಾಧ್ಯಕ್ಷ ದೊಡ್ಡಬಸನಗೌಡ ಬಲ್ಲಟಗಿ, ಸಂಘಟನಾ ಕಾರ್ಯದರ್ಶಿ ಸೂಗೂರಯ್ಯ ಮಠ, ಯಂಕಪ್ಪ ಕಾರಬಾರಿ, ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net