

ಮೈಸೂರು: ನಗರದಲ್ಲಿ ರ‌್ಯಾಪಿಡೋ ವೈಟ್‌ಬೋರ್ಡ್ ಬೈಕ್, ಸ್ಕೂಟರ್, ಟ್ಯಾಕ್ಸಿಗಳಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಮೈಸೂರು ಆಟೋರಿಕ್ಷಾ ಸರ್ವೀಸ್ ಟ್ರಸ್ಟ್ ವತಿಯಿಂದ ನಗರದಲ್ಲಿ ಆಟೋ ಚಾಲಕರು ಶುಕ್ರವಾರ ಪ್ರತಿಭಟನೆ ನಡೆಸಿದರು.
ನ್ಯಾಯ ಸಿಗುವವರೆಗೂ ಸರ್ಕಾರದ ವಿರುದ್ಧ ಧಿಕ್ಕಾರ ಸೂಚಕವಾಗಿ ಕಪ್ಪು ಬಾವುಟ, ಕಪ್ಪುಪಟ್ಟಿಯನ್ನು ಆಟೋರಿಕ್ಷಾದಲ್ಲಿ ಪ್ರದರ್ಶಿಸಲು ಪ್ರತಿಭಟನಾಕಾರರು ತೀರ್ಮಾನಿಸಿದ್ದಾರೆ.
ರ‌್ಯಾಪಿಡೋ ವೈಟ್‌ಬೋರ್ಡ್ ಬೈಕ್, ಸ್ಕೂಟರ್, ಟ್ಯಾಕ್ಸಿಗಳು ನಗರದ ಆಟೋರಿಕ್ಷಾ ಪರ್ಮಿಟ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮತ್ತು ಆರ್‌ಟಿಒ ನಿಯಮಾವಳಿ ಸ್ಪಷ್ಟವಾಗಿ ಉಲ್ಲಂಘಿಸಿ ಸುಮಾರು 3 ವರ್ಷದಿಂದ ಆಟೋರಿಕ್ಷಾಗೆ ಪರ್ಯಾಯವಾಗಿ ಸಂಚರಿಸುತ್ತಿವೆ. ಇದರ ಪರಿಣಾಮ ಆಟೋರಿಕ್ಷಾ ಚಾಲಕರ ನಿತ್ಯದ ದುಡಿಮೆಗೆ ದೊಡ್ಡಮಟ್ಟದ ತೊಂದರೆಯಾಗಿದೆ. ಆಟೋರಿಕ್ಷಾ ಖರೀದಿಗೆ ಮಾಡಿರುವ ಸಾಲವನ್ನು ಮರುಪಾವತಿಸಲು ಆಗುತ್ತಿಲ್ಲ. ಹಣಕಾಸು ಸಂಸ್ಥೆಗಳಿಂದ ಕಾನೂನು ಕ್ರಮ ಎದುರಿಸಬೇಕಾಗಿದೆ ಎಂದು ಅಳಲು ತೊಡಿಕೊಂಡರು.
ಈ ಚಾಲಕರ ಕುಟುಂಬಗಳು ಅತಂತ್ರ ಸ್ಥಿತಿಗೆ ಸಿಲುಕಿ ಬೀದಿಗೆ ಬೀಳುವಂತಾಗಿದೆ. ಮಕ್ಕಳ ಶಿಕ್ಷಣ, ಆರೋಗ್ಯ ಸೇರಿದಂತೆ ಜವಾಬ್ದಾರಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಕಳೆದ 2 ವರ್ಷಗಳಿಂದ ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ, ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ, ಪ್ರತಿಭಟನೆ ಮಾಡಲಾಗಿದೆ. ಆದ್ಯಾಗೂ ಏನು ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.
ಈ ವಾಹನಗಳ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ ಜರುಗಿಸಬಾರದು ಎಂದು ಕೋರ್ಟ್‌ನಿಂದ ತಡೆಯಾಜ್ಞೆ ತರಲಾಗಿದೆ. ಇದನ್ನು ತೆರವುಗೊಳಿಸಿ ನ್ಯಾಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಮೈಸೂರು ನಗರದಲ್ಲಿ 25 ಸಾವಿರ ಸೇರಿದಂತೆ ರಾಜ್ಯದಲ್ಲಿ 1 ಲಕ್ಷ ಆಟೋಗಳಿವೆ. ಇವುಗಳ ಚಾಲಕರು ಮನೆಯಿಂದ ಬರುವಾಗಲೇ ಕಪ್ಪುಪಟ್ಟಿ, ಕಪ್ಪುಬಾವುಟ ಪ್ರದರ್ಶನದೊಂದಿಗೆ ಪ್ರಯಾಣಿಕರಿಗೆ ಸೇವೆ ನೀಡಲಿದ್ದಾರೆ. ಬೇಡಿಕೆ ಈಡೇರಿಸುವವರೆಗೂ ಹೋರಾಟ ಹೀಗೆ ಮುಂದುವರಿಯಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಬಿ.ನಾಗರಾಜು ತಿಳಿಸಿದರು.
ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಶಿವಕುಮಾರ್, ಎಂ.ಲಕ್ಷ್ಮಿನಾರಾಯಣ, ಮಂಜುನಾಥ್, ಯೋಗೇಶ್, ವಸಂತಕುಮಾರ್, ಮೊಹಮ್ಮದ್ ಸುಲ್ತಾನ್, ಎಂ.ಪಿ.ದೊಡ್ಡದೇವಪ್ಪ, ಕೆಂಪರಾಜೇ ಅರಸ್, ಡಿಎಸ್‌ಎಸ್ ಮುಖಂಡರಾದ ಚೋರನಹಳ್ಳಿ ಶಿವಣ್ಣ, ಸೋಮನಾಯಕ್, ಚಿಕ್ಕಕಾಟೂರ ದೇವರಾಜು ಇನ್ನಿತರರಿದ್ದರು.