

ಕಲಬುರಗಿ: ನಗರದಲ್ಲಿ ಆಟೋ ರಿಕ್ಷಾಗಳು ಪ್ರತಿದಿನ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಮಾತ್ರ ಓಡಾಡಬಹುದು. ಒಂದು ಆಟೋದಲ್ಲಿ ಇಬ್ಬರು ಪ್ರಯಾಣಿಕರನ್ನು ಮಾತ್ರ ಕೂಡಿಸಿಕೊಳ್ಳಬೇಕು. ಚಾಲಕ ಸೇರಿ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಪೊಲೀಸ್ ಆಯುಕ್ತಾಲಯದ ಸಂಚಾರ ವಿಭಾಗದ ಎಸಿಪಿ ವೀರೇಶ ಕರಡಿಗುಡ್ಡ ತಿಳಿಸಿದರು.
ಸಂಚಾರ ಪೊಲೀಸ್ ಠಾಣೆ-1ರಲ್ಲಿ ಆಟೋದವರು ಅನುಸರಿಸಬೇಕಾದ ಕ್ರಮಗಳ ಕುರಿತು ಆಟೋ ಯೂನಿಯನ್ ಮುಖಂಡರ ಹಾಗೂ ಚಾಲಕರ ಜತೆ ಸಭೆ ನಡೆಸಿದ ಅವರು, ಲಾಕ್ಡೌನ್ ಹಾಗೂ ನಿಷೇಧಾಜ್ಞೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ತಪ್ಪಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕರೊನಾ ದಿನೇದಿನೆ ಹೆಚ್ಚುತ್ತಿದ್ದರಿಂದ ಯಾರೊಬ್ಬರೂ ಮೈ ಮರೆಯಬಾರದು. ಜಾಗ್ರತೆ ವಹಿಸುವುದು ಬಹುಮುಖ್ಯ. ಪ್ರತಿಯೊಬ್ಬರೂ ಸಾಮಾಜಿಕ ಅಂತರ ಹಾಗೂ ಇತರ ನಿಯಮಗಳನ್ನು ಪಾಲಿಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು ಎಂದರು.
ಸಂಚಾರ ಇನ್ಸ್ಪೆಕ್ಟರ್ ರಮೇಶ ಕಾಂಬಳೆ ಮಾತನಾಡಿ, ಆಟೋ ಚಾಲಕರು ನಿಯಮ ಪಾಲಿಸುವ ಮೂಲಕ ಪೊಲೀಸರಿಗೆ ಸಹರಿಸಬೇಕು. ಮಾಸ್ಕ್ ಇಲ್ಲದವರನ್ನು ಆಟೋದಲ್ಲಿ ಹತ್ತಿಸಿಕೊಳ್ಳಬಾರದು ಎಂದು ಹೇಳಿದರು.
ಪಿಎಸ್ಐ ಭಾರತಿಬಾಯಿ ಧನ್ನಿ, ಆಟೋ ಯೂನಿಯನ್ ಪದಾಧಿಕಾರಿಗಳಾದ ಗುರುಶರಣ ದುಧನಿ, ರೇವಣಸಿದ್ದಪ್ಪ, ಪಾಂಡುರಂಗ ಕೊಟ್ರೆ, ರಾಜು ಕಾವಳೆ, ಶೇಖ ಯೂನಿಸ್ ಇತರರಿದ್ದರು.
ಕಲಬುರಗಿಯಲ್ಲಿ ಕರೊನಾ ನಿಯಂತ್ರಣಕ್ಕೆ ತರಲು ಪ್ರತಿಯೊಬ್ಬರ ಸಹಕಾರ ಬೇಕು. ವಿಶೇಷವಾಗಿ ಆಟೋ ಚಾಲಕರು ಸಾಮಾಜಿಕ ಪ್ರಜ್ಞೆ ಮೆರೆಯಬೇಕು. ಎಲ್ಲರೂ ಸಕರ್ಾರದ ನಿಯಮ ಪಾಲಿಸಬೇಕು. ಪರಸ್ಪರ ಅಂತರ ಕಾಪಾಡುವುದರ ಜತೆಗೆ ಮಾಸ್ಕ್ ಧರಿಸಬೇಕು.
| ವೀರೇಶ ಕರಡಿಗುಡ್ಡ, ಎಸಿಪಿ ಸಂಚಾರ ವಿಭಾಗ