

ಕೆ.ಆರ್.ನಗರ: ಪ್ರಯಾಣಿಕರನ್ನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸುರಕ್ಷಿತವಾಗಿ ತಲುಪಿಸುವ ಜವಾಬ್ದಾರಿ ಆಟೋ ಚಾಲಕರದ್ದು ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
ಪಟ್ಟಣದ ಬಸ್ ನಿಲ್ದಾಣ ಬಳಿ ಅರ್ಕೇಶ್ವರ ಆಟೋ ನಿಲ್ದಾಣವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಚಾಲಕರು ಪರವಾನಗಿ ಇಲ್ಲದೆ, ವಿಮೆ ಪಾಲಿಸಿ ಮಾಡಿಸದೆ ಆಟೋ ಚಾಲನೆ ಮಾಡಬಾರದು. ಯಾರಿಗಾದರೂ ಪರವಾನಗಿ ಮತ್ತು ವಿಮೆ ಅವಶ್ಯಕತೆ ಇದ್ದಲ್ಲಿ ನನ್ನ ಗಮನಕ್ಕೆ ತನ್ನಿ ಎಂದರು.
ಆಟೋ ನಿಲ್ದಾಣ ಅವಶ್ಯಕತೆ ಇರುವ ಕುರಿತು 6 ತಿಂಗಳ ಹಿಂದೆ ಮನವಿ ಬಂದಿತ್ತು. ಆದರೀಗ 2-3 ನಿಲ್ದಾಣ ಮಾಡಿಸುವಂತೆ ಮನವಿ ಮಾಡಿದ್ದು, ಹಂತ-ಹಂತವಾಗಿ ಮಾಡಿಸುವುದಾಗಿ ಭರವಸೆ ನೀಡಿದರು.
ಬಿಳಿಕೆರೆಯಿಂದ ಮುಂಜನಹಳ್ಳಿವರೆಗೆ 800 ಕೋಟಿ ರೂ.ವೆಚ್ಚದಲ್ಲಿ ಚತುಷ್ಪಥ ರಸ್ತೆ ಆಗಲಿದ್ದು, ಆ ನಂತರ ಅಗತ್ಯಕ್ಕೆ ತಕ್ಕಂತೆ ನಿಲ್ದಾಣವನ್ನು ಬೇರೆಡೆಗೆ ವರ್ಗ ಮಾಡಿಕೊಡಲಾಗುವುದೆಂದು ಭರವಸೆ ನೀಡಿದರು.
ಪುರಸಭಾ ಸದಸ್ಯರಾದ ಉಮೇಶ, ಮಾಜಿ ಸದಸ್ಯ ಎನ್.ಶಿವಕುಮಾರ್, ಆಟೋ ಚಾಲಕರ ಸಂಘದ ಗೌರವಾಧ್ಯಕ್ಷ ಕೆ.ಟಿ.ರಮೇಶ್, ಅಧ್ಯಕ್ಷ ಕಾಂತರಾಜು, ಸದಸ್ಯರಾದ ಆನಂದ್‌ಮೂರ್ತಿ, ಮೋಹನ್ ರಾಜ್ ಅರಸ್, ರಜನಿ, ಸಾರಥಿ, ವಸಂತಕುಮಾರ್, ರಘು, ಅರುಣ್, ಜೆಡಿಎಸ್ ನಗರಕಾರ್ಯದರ್ಶಿ ರುದ್ರೆಶ್ ಹಾಜರಿದ್ದರು.