ಆಟೋ ಚಾಲಕರಲ್ಲಿ ಕನ್ನಡಭಿಮಾನ ಹೆಚ್ಚು

21CBP2
Published on

ಚಿಕ್ಕಬಳ್ಳಾಪುರ : ವೃತ್ತಿಯ ಜತೆಗೆ ಕನ್ನಡ ಭಾಷಾಭಿಮಾನ ಬೆಳೆವಣಿಗೆಯಲ್ಲಿ ತೊಡಗಿಸಿಕೊಂಡು ಗಳಿಸಿರುವ ಒಳ್ಳೆಯ ಹೆಸರನ್ನು ಉಳಿಸಿಕೊಂಡು ಹೋಗಬೇಕು ಎಂದು ಸಂಚಾರಿ ಠಾಣೆ ಉಪ ನಿರೀಕ್ಷಕ ಓಂ ಪ್ರಕಾಶ್‌ಗೌಡ ಆಟೋ ಚಾಲಕರಿಗೆ ಸಲಹೆ ನೀಡಿದರು.

ನಗರದ ಸರ್.ಎಂ.ವಿ.ವೃತ್ತದಲ್ಲಿ ಬಲಮುರಿ ಆಟೋ ನಿಲ್ದಾಣದ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದರು.

ಆಟೋ ಚಾಲಕರು ಕನ್ನಡ ಭಾಷೆ ಮೇಲೆ ಅಭಿಮಾನ ಹೊಂದಿದ್ದಾರೆ. ಆಟೋಗಳ ಮೇಲೆ ಕನ್ನಡದ ಸಂದೇಶ ಬರೆಸಿ, ಗಮನ ಸೆಳೆಯುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ನಿರಂತರ ಕನ್ನಡ ಉಳಿವಿನಲ್ಲಿ ಶ್ರಮಿಸುತ್ತಿರುವುದರ ಜತೆಗೆ ನಾಡಹಬ್ಬಗಳನ್ನು ಆಚರಿಸುತ್ತಿದ್ದಾರೆ. ಇದಕ್ಕೆ ಈಗಲೂ ಜನರು ಹೆಮ್ಮೆ ಪಡುತ್ತಾರೆ ಎಂದರು.

ವಾಹನ ಚಾಲನೆ ಮಾಡುವ ವೇಳೆ ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಧರಿಸಿರಬೇಕು. ವಾಹನ ಮತ್ತು ಸಂಬಂಧಿಸಿದ ದಾಖಲೆಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದರ ಜತೆಗೆ ಸಂಚಾರಿ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಿ, ಮೆಚ್ಚುಗೆಗೆ ಪಾತ್ರರಾಗಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಆಟೋ ಚಾಲಕ ಮತ್ತು ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಡಾಂಬೂ ಶ್ರೀನಿವಾಸ್ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ವಾಹನ ನಿರ್ವಹಣೆ ವೆಚ್ಚ ಹೆಚ್ಚಳದಿಂದ ಆಟೋ ಚಾಲಕರು ತೊಂದರೆ ಅನುಭವಿಸುವಂತಾಗಿದೆ. ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದು ಸರ್ಕಾರ ಮತ್ತು ಜನರು ಉತ್ತಮ ಕಾರ್ಯ ನಿರ್ವಹಣೆಗೆ ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಆಟೋ ಚಾಲಕರು ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಘೋಷಣೆಗಳೊಂದಿಗೆ ನಾಡ ದೇವತೆ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಸಂಚಾರಿ ಠಾಣೆ ಎಎಸ್‌ಐ ವೇಣುಗೋಪಾಲ್, ಆಟೋ ಚಾಲಕ ಮತ್ತು ಮಾಲೀಕರ ಸಂಘದ ತಾಲೂಕು ಅಧ್ಯಕ್ಷ ಎ.ಬಾಲಕೃಷ್ಣ, ಸಮಾಜ ಸೇವಕ ಮಹೇಶ್, ನಗರ ಸಭೆ ಸದಸ್ಯ ಗ್ಯಾಸ್ ನಾಗರಾಜ್, ಮಾಜಿ ಸದಸ್ಯ ಮಹಾಕಾಳಿ ಬಾಬು, ಮುಖಂಡರಾದ ಜೆ.ಪಿ.ಪ್ರಕಾಶ್, ರಾಮಕೃಷ್ಣ, ರಮೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net