ಆಟೋ ಗ್ಯಾಸ್ 8 ರೂ. ಹೆಚ್ಚಳ

3HSN1
Published on

ಹಾಸನ: ಒಂದೇ ದಿನದಲ್ಲಿ ಪ್ರತಿ ಲೀಟರ್ ಆಟೋ ಗ್ಯಾಸ್ ದರದಲ್ಲಿ 8 ರೂ. ಏರಿಕೆಯಾಗಿದ್ದು, ಆಟೋರಿಕ್ಷಾ ಚಾಲಕರು ಕಂಗಾಲಾಗಿದ್ದಾರೆ.

ಪ್ರತಿ ಲೀಟರ್‌ಗೆ 42 ರೂ. ಇದ್ದ ಗ್ಯಾಸ್ ದರ ಫೆ.1ರಿಂದ 50.30 ರೂ.ಗೆ ಏರಿಕೆ ಕಂಡಿದೆ. ಆಟೋ ರಿಕ್ಷಾಗಳಿಗೆ ಗ್ಯಾಸ್ ಭರ್ತಿ ಮಾಡಿಸಲು ಹೋದ ಚಾಲಕರು ಹೊಸ ಬೆಲೆ ನೋಡಿ ಕಂಗಾಲಾಗಿದ್ದಾರೆ. ಈಗಿನ ಬೆಲೆಯಲ್ಲಿ ಇಂಧನ ಖರೀದಿಸಿದರೆ ನಾವು ಜೀವನ ನಡೆಸುವುದು ಸಾಧ್ಯವೇ ಇಲ್ಲ. ತಕ್ಷಣ ಜಿಲ್ಲಾಡಳಿತ ಕನಿಷ್ಠ ಪ್ರಯಾಣ ದರ ಏರಿಕೆಗೆ ಅವಕಾಶ ಮಾಡಿಕೊಡಬೇಕು ಎಂದು ಚಾಲಕರು ಆಗ್ರಹಿಸಿದ್ದಾರೆ.

ಆಟೋ ಚಾಲನೆ ಮೂಲಕ ಜೀವನ ನಡೆಸುತ್ತಿರುವ ನೂರಾರು ಚಾಲಕರು ಬೆಲೆ ಏರಿಕೆ ಬಿಸಿಗೆ ನಲುಗಿದ್ದು, ನಷ್ಟದ ಭೀತಿಯಲ್ಲಿದ್ದಾರೆ. ಇಂಧನ ದರ ಹೆಚ್ಚಳದಿಂದ ಪ್ರಯಾಣ ದರ ಏರಿಸಿದರೆ ಸಾರ್ವಜನಿಕರು ಒಪ್ಪುತ್ತಿಲ್ಲ. ಒಂದೇ ಬಾರಿಗೆ ಬೆಲೆ ಗಗನಕ್ಕೇರಿರುವುದು ಚಾಲಕರ ನಿದ್ದೆಗೆಡಿಸಿದೆ.

ದಾರಿಯೂ ದೂರ, ಬೆಲೆಯೂ ಹೆಚ್ಚಳ:
ಹಾಸನದಲ್ಲಿ ಹೊಸ ಬಸ್ ನಿಲ್ದಾಣಕ್ಕೆ ಆಟೋ ಓಡಿಸುವುದರಿಂದಲೇ ಆದಾಯ ಬರುತ್ತದೆ. ನಗರದ ಇತರ ಬಡಾವಣೆಗಳಲ್ಲಿ ಬಾಡಿಗೆ ಸಿಗುವುದು ಕಡಿಮೆ. ಮನೆಗೊಂದು ಕಾರು, ಬೈಕ್ ಇರುವುದರಿಂದ ಆಟೋಗಾಗಿ ಯಾರೂ ಕಾಯುವುದಿಲ್ಲ. ಹೊಸ ಬಸ್ ನಿಲ್ದಾಣ ಮಾರ್ಗದಲ್ಲೇ ದುಡಿಮೆ ಮಾಡಿಕೊಳ್ಳುತ್ತಿದ್ದರು. ಆದರೆ, ರೈಲ್ವೆ ಮೇಲ್ಸೇತುವೆ ಕಾಮಗಾರಿ ಪ್ರಾರಂಭವಾಗಿರುವುದರಿಂದ ಬಸ್ ನಿಲ್ದಾಣ ತಲುಪಲು ಎರಡು ಕಿ.ಮೀ. ಸುತ್ತಬೇಕಿದೆ. ಇದರ ನಡುವೆ ಗ್ಯಾಸ್ ದರ ಹೆಚ್ಚಿದ್ದು ದಾರಿಯೂ ದೂರ, ಇಂಧನ ಬೆಲೆಯೂ ಹೆಚ್ಚಳ ಎಂಬಂತಾಗಿದೆ. ಜಿಲ್ಲಾಡಳಿತ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದರೆ ಎಲ್ಲ ಆಟೋ ಚಾಲಕರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸ್ಲೇಟರ್ಸ್‌ ಹಾಲ್ ಪಾಯಿಂಟ್‌ನ ಆಟೋ ಚಾಲಕ ಮೋಹನ್ ಹೇಳಿದರು.

ತಿಂಗಳ ಕೊನೆಗೆ ಗ್ಯಾಸ್ ಇರಲ್ಲ:
ಪ್ರತಿ ತಿಂಗಳ 1ನೇ ತಾರೀಖು ಆಟೋ ಗ್ಯಾಸ್ ದರದಲ್ಲಿ ಹೆಚ್ಚಳ ಮಾಡಲಾಗುತ್ತಿದೆ. ಕಳೆದ ಐದಾರು ತಿಂಗಳಿಂದ ದರದಲ್ಲಿ ಏರಿಕೆಯಾಗುತ್ತಿರುವುದನ್ನು ಮನಗಂಡಿರುವ ಬಂಕ್ ಮಾಲೀಕರು ತಿಂಗಳ ಕೊನೇ ದಿನ ಗ್ಯಾಸ್ ಇಲ್ಲ ಎಂಬ ನಾಮಫಲಕ ಅಂಟಿಸಿರುತ್ತಾರೆ. ಮಾರನೇ ದಿನ ಹೆಚ್ಚಾದ ದರದೊಂದಿಗೆ ಮಾರಾಟ ಮಾಡುತ್ತಾರೆ. ಆಟೋಗೆ ಪ್ರತಿ ಬಾರಿ ಕನಿಷ್ಠ 5 ಲೀಟರ್ ಗ್ಯಾಸ್ ತುಂಬಿಸುತ್ತೇನೆ. ಅಂದರೆ ಈಗ 45ರಿಂದ 50 ರೂ. ಹೆಚ್ಚಿಗೆ ಪಾವತಿಸಬೇಕಾಗಿದೆ. ಜ.31ರಂದು ಗ್ಯಾಸ್ ಇದ್ದರೂ ವಾಪಸ್ ಕಳಿಸಿ ಹೆಚ್ಚಿನ ದರಕ್ಕೆ ಮಾರನೇ ದಿನದಿಂದ ಮಾರಾಟ ಮಾಡಲಾಗುತ್ತದೆ. ಇದಕ್ಕೆ ಯಾರು ಹೊಣೆ ಎಂದು ಆಟೋ ಚಾಲಕ ಕಿರಣ್ ಶೆಟ್ಟಿ ಪ್ರಶ್ನಿಸಿದರು.
ಗೋ ಗ್ಯಾಸ್, ಎಚ್‌ಪಿ ಬಂಕ್‌ಗಳಲ್ಲಿ ಪ್ರತಿ ಲೀಟರ್ ಗ್ಯಾಸ್‌ಗೆ 50 ರೂ. ನಿಗದಿಪಡಿಸಿದ್ದರೆ ರಿಲಯನ್ಸ್‌ನವರು 48 ರೂ.ಗೆ ನೀಡುತ್ತಿದ್ದಾರೆ. ಆದರೆ, ನಗರದಿಂದ ಆ ಬಂಕ್ ದೂರ ಇರುವುದರಿಂದ ಚಾಲಕರು ಹತ್ತಿರದ ಪಾಯಿಂಟ್‌ಗೆ ಹೋಗುತ್ತಿದ್ದಾರೆ. ಬಿಎಂ ರಸ್ತೆ ಹಾಗೂ ತಣ್ಣೀರುಹಳ್ಳದಲ್ಲಿರುವ ಗ್ಯಾಸ್ ಬಂಕ್‌ಗಳನ್ನೇ ಆಟೋ ಚಾಲಕರು ಅವಲಂಬಿಸಿದ್ದಾರೆ.

ಪ್ರತಿಭಟನೆಗೆ ನಿರ್ಧಾರ:
ಗ್ಯಾಸ್ ದರ ಏರಿಕೆ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಆದರೆ ಇದರಿಂದ ಬೆಲೆ ಕಡಿಮೆಯಾಗುತ್ತದೆ ಎಂಬ ನಂಬಿಕೆ ಆಟೋ ಚಾಲಕರಿಗೆ ಇಲ್ಲ. ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net