'ಆಟಿಸಂ' ಜಾಗೃತಿಗೆ ವಾಕಥಾನ್

mysore
Published on

ಮೈಸೂರು: ವಿಶ್ವ ಆಟಿಸಂ ಜಾಗೃತಿ ದಿನ ಅಂಗವಾಗಿ ದೇವದಾನ್ ಫೌಂಡೇಷನ್ ಕಲಿಕಾ ಕೇಂದ್ರ ಹಾಗೂ ಪಾದ ಟ್ರಸ್ಟ್ ಸಹಯೋಗದೊಂದಿಗೆ ಭಾನುವಾರ ನಗರದಲ್ಲಿ ‘ಭರವಸೆಯ ನಡಿಗೆಯೊಂದಿಗೆ-ಆಟಿಸಂ ಸ್ವೀಕರಿಸೋಣ’ ಎಂಬ ಘೋಷ ವಾಕ್ಯದಡಿಯಲ್ಲಿ ವಾಕಥಾನ್ ನಡೆಯಿತು.

ನಗರದ ಅರಮನೆ ಮುಂಭಾಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ಆರಂಭಗೊಂಡ ಕಾಲ್ನಡಿಗೆ ಜಾಥಾ, ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿಯ ಒವೆಲ್ ಮೈದಾನದಲ್ಲಿ ಕೊನೆಗೊಂಡಿತು.

ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿದ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಶಂಕರ ಗೌಡ ಪಾಟೀಲ್ ಮಾತನಾಡಿ, ಆಟಿಸಂ ಅಂಗವೈಕಲ್ಯಗಳಲ್ಲಿ ಒಂದಾಗಿದೆ. ಇಂತಹ ಕಾಯಿಲೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಈ ರೀತಿಯ ಜಾಗೃತಿ ಕಾರ್ಯಕ್ರಮ ಅಗತ್ಯ.

ಆಟಿಸಂನ ಗುಣ ಲಕ್ಷಣಗಳನ್ನು ಮೊದಲೇ ಗುರುತಿಸಿದರೆ ವೈದ್ಯಕೀಯವಾಗಿ ಸಕಾಲಿಕ ಬೆಂಬಲ ಮತ್ತು ಚಿಕಿತ್ಸೆ ಒದಗಿಸಬಹುದು. ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ಸಹಾಯವನ್ನು ನೀಡಲು ಸರ್ಕಾರ ಬದ್ಧ ಎಂದು ಹೇಳಿದರು.

ಸುಮಾರು ಮೂರು ದಶಕಗಳಿಂದ ಆಟಿಸಂ ಜಾಗೃತಿಗಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಸ್ವಸ್ತಿ ಸಿಂಗ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಆಟಿಸಂನ ಹರಡುವಿಕೆಯು ತೀವ್ರವಾಗಿ ಹೆಚ್ಚಾಗಿದೆ. ಈ ಮೊದಲು ಹತ್ತು ಸಾವಿರದಲ್ಲಿ ಒಬ್ಬರಿಗೆ ಮಾತ್ರ ಈ ಕಾಯಿಲೆ ಕಾಣಿಸಿಕೊಳ್ಳುತ್ತಿತ್ತು.

ಈಗ ಮೂವತ್ತರಿಂದ ಐವತ್ತು ಮಕ್ಕಳಲ್ಲಿ ಒಬ್ಬರಿಗೆ ಈ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಸರ್ಕಾರದ ಬೆಂಬಲವಿಲ್ಲದೆ ಇಂತಹ ಜಾಗೃತಿ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಎಲ್ಲರ ಸಹಕಾರ ಅಗತ್ಯ ಎಂದರು.

ರಿವೈವ್ ಆಸ್ಪತ್ರೆಯ ಮನೋವೈದ್ಯ ಡಾ. ಕೃಷ್ಣ ಮಾತನಾಡಿ, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇದು ಪ್ರಚಲಿತವಾಗಿದೆ. ಆಟಿಸಂ ಗುಣ ಲಕ್ಷಣವನ್ನು ಮೊದಲೇ ಗುರುತಿಸಿ, ಅಂತಹವರ ಬಗ್ಗೆ ಕಾಳಜಿ ಮತ್ತು ಗಮನ ನೀಡುವುದು ಮುಖ್ಯ ಎಂದರು.

ಫೌಂಡೇಷನ್ ಕಲಿಕಾ ಕೇಂದ್ರದ ನಿರ್ದೇಶಕ ದೇವಯ್ಯ, ಪಾದಾ ಟ್ರಸ್ಟಿನ ಸಂಗೀತ, ಫ್ಯಾಷನ್ ಡಿಸೈನರ್ ಜಯಂತಿ ಬಲ್ಲಾಳ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net