

ಯಳಂದೂರು: ತಾಲೂಕಿನ ಪ್ರಸಿದ್ಧ ಶ್ರೀಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಆಂಗ್ಲ ಮಾಧ್ಯಮ ಶಾಲೆಯ ಕಟ್ಟಡ ಭವ್ಯವಾಗಿ ತಲೆಯೆತ್ತಿ ನಿಂತಿದೆ. ಆದರೆ ಹಲವು ವರ್ಷ ಉರುಳಿದರೂ ಈ ವಸತಿ ಶಾಲೆಗೆ ಸರಿಯಾದ ಆಟದ ಮೈದಾನವೇ ಇಲ್ಲ.
14 ಕೋಟಿ ರೂ. ವೆಚ್ಚದಲ್ಲಿ 2006-07ನೇ ಸಾಲಿನ ಅವಧಿಯಲ್ಲಿ ತಾಲೂಕಿಗೆ ಒಂದು ಮುರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಸರ್ಕಾರ ಮಂಜೂರು ಮಾಡಿತ್ತು. ಆದರೆ ಸೂಕ್ತ ಸ್ಥಳದ ಕೊರತೆಯಿಂದಾಗಿ ಶಾಲೆ ನಡೆಸಲು ಕಷ್ಟಕರವಾಗಿತ್ತು. ಆ ಸಮಯದಲ್ಲಿ ಮೆಳ್ಳಹಳ್ಳಿ ಗೇಟ್ ಬಳಿಯಲ್ಲಿ ಬಾಡಿಗೆ ಆಧಾರದಲ್ಲಿ ಖಾಸಗಿ ಕಟ್ಟಡವನ್ನು ಪಡೆದು ನಡೆಸಲಾಗುತ್ತಿತ್ತು. ಸಂಸದರಾಗಿದ್ದ ಆರ್. ಧ್ರುವನಾರಾಯಣ ಈ ವಸತಿ ಶಾಲೆಯನ್ನು ಸಂತೇಮರಹಳ್ಳಿ ಹೋಬಳಿಯ ಉಮ್ಮತ್ತೂರು ಬಳಿಯಲ್ಲಿ ನಿರ್ಮಿಸಿದ್ದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡಕ್ಕೆ ಸ್ಥಳಾಂತರಿಸಿ ಸರ್ಕಾರದ ಹಣ ಬಾಡಿಗೆ ರೂಪದಲ್ಲಿ ಹೋಗುವುದನ್ನು ತಪ್ಪಿಸಿದ್ದರು.
ಅಲ್ಲಿ ಎರಡು ಮುರಾರ್ಜಿ ದೇಸಾಯಿ ವಸತಿ ಶಾಲೆಗಳು ಒಟ್ಟಿಗೆ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳು ಇಕ್ಕಟ್ಟಿನಲ್ಲಿ ಕಲಿಯುತ್ತಿದ್ದರು. ನಂತರ 2019ರಲ್ಲಿ ಪ್ರತ್ಯೇಕವಾಗಿ ವಸತಿ ಶಾಲೆಯನ್ನು ಉದ್ಘಾಟಿಸಿ ಪ್ರಾರಂಭಿಸಲಾಯಿತು.
ಈ ವಸತಿ ಶಾಲೆಗೆ ಮೈದಾನ ನಿರ್ಮಿಸುವಂತೆ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು, ಸ್ಥಳೀಯ ಗ್ರಾಮ ಪಂಚಾಯಿತಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. 6 ರಿಂದ 10ನೇ ತರಗತಿವರೆಗೂ ಸುಮಾರು 248ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ವಸತಿ ಶಾಲೆ ಕಟ್ಟಡ ತುಂಬಾ ಸುಸಜ್ಜಿತವಾಗಿದೆ.
ಈ ಶಾಲೆ ಸತತ 10 ವರ್ಷಗಳಿಂದಲೂ ಶೇ. 100ರಷ್ಟು ಉತ್ತಮ ಫಲಿತಾಂಶ ಪಡೆಯುತ್ತಿದ್ದು, ಪಾಠದಷ್ಟೇ ಆಟವೂ ಮುಖ್ಯ. ಆದರೆ ಆಟವಾಡಲು ಕ್ರೀಡಾ ಮೈದಾನ ಸೂಕ್ತವಾಗಿಲ್ಲ. ಇದರಿಂದ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಯಿಂದ ಹಿಂದುಳಿದಿದ್ದಾರೆ.
ಸುಮಾರು 10 ಎಕರೆ ಪ್ರದೇಶದಲ್ಲಿರುವ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಲಯ, ಪ್ರಾಂಶುಪಾಲರ ಕೊಠಡಿ, ಶಿಕ್ಷಕರ ವಸತಿಗೃಹ, ಉಪಾಹಾರ ಕೊಠಡಿ, ಕಲಿಕೆ ಕೊಠಡಿ ಸೇರಿದಂತೆ 3 ಎಕರೆ ಪ್ರದೇಶದಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ. ಉಳಿದ 6ಕ್ಕೂ ಹೆಚ್ಚು ಎಕರೆ ಪ್ರದೇಶವು ಹಳ್ಳಕೊಳ್ಳಗಳಿಂದ ಕೂಡಿದ್ದು, ಗಿಡ-ಮರಗಳು ಬೆಳೆದು ಕಾಡಿನಂತೆ ಆಗಿದೆ. ಇದರಿಂದ ಆನೆ, ಚಿರತೆ, ಕಾಡು ಹಂದಿಗಳು ವಸತಿ ಶಾಲೆಗೆ ಬರುತ್ತವೆ. ಹಾಗಾಗಿ ಇದನ್ನು ಸರಿಪಡಿಸಿ ಮೈದಾನ ಮಾಡಬೇಕಿದೆ.