

ಬಾಗೇಪಲ್ಲಿ: ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಕೈಗೊಂಡಿರುವ ಸೈಕಲ್ ರ‌್ಯಾಲಿಯನ್ನು ಬಾಗೇಪಲ್ಲಿಯ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಶುಕ್ರವಾರ ಸ್ವಾಗತಿಸಿದರು.
ಸಿಆರ್‌ಪಿಎಫ್ ಪಡೆಯ ನಾಲ್ಕು ತಂಡಗಳು ಕಳೆದ ಆ.22 ರಂದು ರ‌್ಯಾಲಿ ಹೊರಟಿದ್ದು ಒಂದು ತಂಡವು ಕನ್ಯಾಕುಮಾರಿಯಿಂದ ನವದೆಹಲಿಯ ರಾಜ್ ಘಾಟ್‌ಗೆ, ಎರಡನೇ ತಂಡವು ಕಾಶ್ಮೀರದಿಂದ ರಾಜ್ ಘಾಟ್‌ಗೆ, ಮೂರನೇ ತಂಡ ಗುಜರಾತ್ ಮತ್ತು ನಾಲ್ಕನೇ ತಂಡವು ಅಸ್ಸಾಂನಿಂದ ರಾಜ್ ಘಾಟ್‌ಗೆ ಅ.2 ರಂದು ತೆರಳಲಿದೆ. ರ‌್ಯಾಲಿಯು ದೇಶದ ಉದ್ದಗಲಕ್ಕೂ ಸಂಚರಿಸಿ, ಸ್ವಾತಂತ್ರ್ಯ ಸಂಗ್ರಾಮದ ಮಹತ್ವ ಸಾರುತ್ತಿವೆ.
ಸಿಆರ್‌ಪಿಎಫ್ ನ ಡೆಪ್ಯೂಟಿ ಕಮಾಂಡೆಂಟ್ ರಮೇಶ್ ಕುಮಾರ್ ತಂಡವು ಆಂಧ್ರದಿಂದ ಜಿಲ್ಲೆಗೆ ಆಗಮಿಸಿದಾಗ ಅದ್ದೂರಿ ಸ್ವಾಗತ ಕೋರಲಾಯಿತು. ಇದರ ಅಂಗವಾಗಿ ನಡೆದ ಭರತ ನಾಟ್ಯ, ದೇಶ ಭಕ್ತಿಗೀತೆ ಗಾಯನ, ಜಾನಪದ ನೃತ್ಯ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್, ಸಿಆರ್‌ಪಿಎಫ್ ನ ಅಸಿಸ್ಟೆಂಟ್ ಕಮಾಂಡೆಂಟ್‌ಗಳಾದ ಕಾರ್ತಿಕ್, ವಿನಾಯಕ, ಸಮನ್ವಯ ಅಧಿಕಾರಿ ತ್ರಿಲೋಚನಾ ಪ್ರಸಾದ್, ಉಪ ಪೊಲೀಸ್ ವರಿಷ್ಠಾಧಿಕಾರಿ ವಾಸುದೇವ್, ಬಾಗೇಪಲ್ಲಿ ತಹಸೀಲ್ದಾರ್ ದಿವಾಕರ್, ತಾಪಂ ಇಒ ಮಂಜುನಾಥ ಸ್ವಾಮಿ, ಸಂಪನ್ಮೂಲ ವ್ಯಕ್ತಿ ಡಾ ಚಿನ್ನಕೈವಾರಮಯ್ಯ ಮತ್ತಿತರರು ಇದ್ದರು.