

ಸಾಗರ: ಯಾವುದೇ ಸಾಂಪ್ರದಾಯಿಕ ಆಚರಣೆ, ಆರಾಧನೆ, ಹಾಡು-ಹಸೆ ಆಯಾ ಜನಸಮುದಾಯದ ಆಸ್ತಿ. ಅವುಗಳ ದಾಖಲೀಕರಣದಿಂದ ಮುಂದಿನ ಪೀಳಿಗೆಗೆ ಅಪೂರ್ವ ಸಂಗ್ರಹ ಸಿಕ್ಕಂತಾಗುತ್ತದೆ. ಆ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನ ಆಗಬೇಕು ಎಂದು ಅರಣ್ಯ ಇಲಾಖೆ ನಿವೃತ್ತ ಆಡಳಿತಾಕಾರಿ ಎಂ.ನಾರಾಯಣ ಕಾಸ್ಪಾಡಿ ಹೇಳಿದರು.
ಸಾಗರ ಸಮೀಪದ ಕುಗ್ವೆ ಗ್ರಾಮದ ಸವಿತಾ-ಸುರೇಶ್ ಅವರ ನಿವಾಸದ ಆವರಣದಲ್ಲಿ ಸಮಾನಮನಸ್ಕ ಸ್ನೇಹಿತರು ಆಯೋಜಿಸಿದ್ದ ದೀವರ ಸಂಪ್ರದಾಯ ಹಾಡುಗಳ ದಾಖಲೀಕರಣ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಹಾಡುಗಳು ಕೇವಲ ರಂಜನೆಗಾಗಿ ಇರುವುದಲ್ಲ. ಅವು ಜನಸಮುದಾಯದ ನೋವು-ನಲಿವಿನ ನುಡಿಗಳು. ಒಂದು ಜನಸಮುದಾಯದ ಇತಿಹಾಸ, ಜೀವನಕ್ರಮ ಎಲ್ಲವನ್ನೂ ಈ ಹಾಡುಗಳು ನಿರೂಪಿಸುತ್ತವೆ. ನಮ್ಮ ಹಿರಿಯರು ಬೆಳೆದುಬಂದ ಬಗೆಯನ್ನೂ ಇವು ನಮಗೆ ತಿಳಿಸುತ್ತವೆ. ಸಂಶೋಧನೆ ದೃಷ್ಟಿಯಿಂದಲೂ ಇದು ಮಹತ್ವದ ಕೆಲಸ. ಆದ್ದರಿಂದ ಈ ಸಂದರ್ಭದಲ್ಲಿ ಸಂಪ್ರದಾಯ ಹಾಡುಗಳ ದಾಖಲೀಕರಣ ಅಗತ್ಯವಿದೆ ಎಂದರು.
ಮಲೆನಾಡಿನಲ್ಲಿ ದೀವರು ಪ್ರಕೃತಿ ಜತೆ ಹೆಚ್ಚು ಒಡನಾಟ ಇಟ್ಟುಕೊಂಡವರು. ಅವರ ಹಬ್ಬ-ಹರಿದಿನಗಳಲ್ಲಿ ಸಾಂಸ್ಕೃತಿಕ ಪ್ರಜ್ಞೆ ಗಾಢವಾಗಿದೆ. ಇದು ಮುಂದಿನ ಜನಾಂಗಕ್ಕೂ ವರ್ಗಾವಣೆಯಾಗಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಅಭಿಯಾನದಲ್ಲಿ ಕುಗ್ವೆ, ಬರದವಳ್ಳಿ, ಗಾಳಿಪುರ, ಜನೆಹಕ್ಲು, ಮರತೂರು, ಹೊಸಕೊಪ್ಪ ಮತ್ತಿತರ ಗ್ರಾಮಗಳ 60ಕ್ಕೂ ಹೆಚ್ಚು ಕಲಾವಿದರು ಹಾಡಿದ ಹಾಡುಗಳ ಆಡಿಯೋ, ವಿಡಿಯೋ ದಾಖಲೀಕರಣ ನಡೆಯಿತು.
ಪ್ರಮುಖರಾದ ಎನ್.ಶಿವಾನಂದ ಕುಗ್ವೆ, ಕೆ.ಈಶ್ವರನಾಯ್ಕ, ಗ್ರಾಮ ಸುಧಾರಣಾ ಸಮಿತಿ ಅಧ್ಯಕ್ಷ ನಾರಾಯಣ, ಎಂಪಿಎಂ ನಿವೃತ್ತ ಅಕಾರಿ ನಾರಾಯಣಪ್ಪ, ಪ್ರಮುಖರಾದ ಮೆಳವರಿಗೆ ಹಾಲಪ್ಪ, ಪರಶುರಾಮಪ್ಪ, ಮಂಜಪ್ಪ, ರವಿ ಕುಗ್ವೆ, ಮಹಾಬಲೇಶ್ವರ ಕುಗ್ವೆ, ವಿಶ್ವನಾಥ ಕುಗ್ವೆ, ಜಯರಾಮ, ಈಶ್ವರ, ಕಲಾವಿದರಾದ ಕಾಗೋಡು ನಾರಾಯಣಪ್ಪ, ಲಕ್ಷ್ಮಣ ಕುಗ್ವೆ, ಜನಾರ್ದನ, ರಾಜು ಜನ್ನೆಹಕ್ಲು, ಕಂಬಳಿಕೊಪ್ಪ ಮೈಲಪ್ಪ ಮತ್ತಿತರರಿದ್ದರು.
ಸಾಂಪ್ರದಾಯಿಕ ಹಾಡುಗಳನ್ನು ಹೇಳುವವರ ಸಂಖ್ಯೆ ಇಂದು ಕಡಿಮೆಯಾಗುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ಇವು ಮರೆಯಾಗುವ ಸಾಧ್ಯತೆಯೂ ಉಂಟು. ಮುಂದಿನ ಪೀಳಿಗೆಗೆ ಇದರ ಸಾರವನ್ನು ತಿಳಿಸುವ ದೃಷ್ಟಿಯಿಂದ ಕೆಲವು ಸಮಾನಮನಸ್ಕ ಸ್ನೇಹಿತರು ಸೇರಿ ದಾಖಲೀಕರಣಕ್ಕೆ ಮುಂದಾಗಿದ್ದೇವೆ. ಪ್ರಸ್ತುತ ತಾಲೂಕಿನ ತಾಳಗುಪ್ಪ ಭಾಗದ ಕಲಾವಿದರ ಹಾಡುಗಳ ದಾಖಲೀಕರಣ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಹೊಸನಗರ, ತೀರ್ಥಹಳ್ಳಿ ತಾಲೂಕುಗಳಲ್ಲಿಯೂ ಈ ಅಭಿಯಾನ ನಡೆಯಲಿದೆ.
ಎಂ.ನಾರಾಯಣ ಕಾಸ್ಪಾಡಿ, ಅರಣ್ಯ ಇಲಾಖೆ ನಿವೃತ್ತ ಆಡಳಿತಾಕಾರಿ